ಸುದ್ದಿ9ಬೆಳ್ತಂಗಡಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಯ ಸಮೀಪದ ಕುದ್ಯಾಡಿ ಗ್ರಾಮದ ಕಡೆಕ್ಕಾರು ಎಂಬಲ್ಲಿ ಕಳೆದ ಶುಕ್ರವಾರ ರಾತ್ರಿ ನಡೆದ ಸಹೋದರರ ತಲವಾರು ಕಾಳಗದಲ್ಲಿ ಮೃತಪಟ್ಟ ಶೇಖರ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು, ಆತನ ಮುಖ್ಯ ಉದ್ದೇಶ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡುವುದಾಗಿತ್ತು ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಬುಧವಾರ ಶೇಖರನ ಇಬ್ಬರು ಪತ್ನಿಯರ ಮಧ್ಯೆ ಗಲಾಟೆ ನಡೆದಿದ್ದು, ಮೊದಲ ಪತ್ನಿ ತನ್ನನ್ನು ಶೇಖರ ಕೊಲೆಗೈಯುವ ಭಯದಿಂದ ರಾತೋರಾತ್ರಿ ತನ್ನ ಮೂವರು ಹೆಣ್ಣು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಪಕ್ಕದ ಕಾಡಿನಲ್ಲಿ ಅಡಗಿ ಕುಳಿತಿದ್ದಳು. ಶೇಖರ ತನ್ನ ಪತ್ನಿ ಮರುದಿನ ಬರಬಹುದೆಂದು ನಿರೀಕ್ಷಿಸಿದ್ದ. ಆಕೆ ತನ್ನ ವಿರುದ್ಧ ಪೊಲೀಸರಿಗೆ ದೂರು ಕೊಡಬಹುದು ಎಂದು ಆಕೆಗಾಗಿ ಅಕ್ಕಪಕ್ಕದ ಮನೆಗಳಲ್ಲಿ ಹುಡುಕಾಟ ಕೂಡಾ ನಡೆಸಿದ್ದ.

ಶುಕ್ರವಾರ ಸಂಜೆಯೂ ಆಕೆ ಬಾರದೇ ಇದ್ದಾಗ ತನ್ನ ಅಣ್ಣನಾದ ಕೃಷ್ಣಪ್ಪ ಆಕೆಗೆ ಧೈರ್ಯ ನೀಡಿರಬಹುದು ಎಂದು ಶಂಕಿಸಿ ಕೋಪದಿಂದ ಅಣ್ಣ ಕೃಷ್ಣಪ್ಪನ ಮನೆಗೆ ತೆರಳಿದ್ದ ಶೇಖರ ತಾನು ಕೊಂಡೊಯ್ದಿದ್ದ ಮಚ್ಚಿನಿಂದ ಏಕಾಏಕಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ರಕ್ಷಣೆಗೋಸ್ಕರ ಕೃಷ್ಣಪ್ಪನೂ ತನ್ನ ಕೈಯಲ್ಲಿದ್ದ ಕತ್ತಿಯಿಂದ ಪ್ರತಿ ಹಲ್ಲೆ ಮಾಡಿದ್ದಾನೆ. ಕೃಷ್ಣಪ್ಪನ ಏಟಿನಿಂದ ಶೇಖರನ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ.

ಗಂಭೀರ ಗಾಯಗೊಂಡು ಕುಸಿದುಬಿದ್ದ ಸೋದರರನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಶೇಖರ ಮೃತಪಟ್ಟರೆ ಕೃಷ್ಣಪ್ಪ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾನೆ. ಶನಿವಾರ ಶೇಖರನ ಅಂತ್ಯಸಂಸ್ಕಾರವನ್ನು ಮಾಡಲಾಗಿದೆ.

ಬೇಲಾಳ ಮೂವರು ಮಕ್ಕಳಾದ ಸ್ನೇಹಾ(8),ರಕ್ಷಿತಾ(4),ಶಮಿತಾ(2)ಳನ್ನು ಶೇಖರನ ಎರಡನೇ ಹೆಂಡತಿ ಬಜಗೋಳಿಯ ಪ್ರಮೀಳಾ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಶನಿವಾರ ವೇಣೂರು ಪೊಲೀಸರ ಸಮ್ಮುಖದಲ್ಲಿ ಮಕ್ಕಳನ್ನು ಬೇಲಾಳ ವಶಕ್ಕೆ ಒಪ್ಪಿಸಲಾಗಿದೆ.

ಶೇಖರ 20 ವರ್ಷಗಳ ಕಾಲ ಮುಂಬೈಯಲ್ಲಿ ಇದ್ದ. ಈ ವೇಳೆ ಭೂಗತ ಜಗತ್ತಿನ ಸಂಪರ್ಕವನ್ನು ಹೊಂದಿದ್ದ. ಹಫ್ತಾ ವಸೂಲಿ, ಪೆಟ್ರೋಲ್ ದಂಧೆಯಲ್ಲಿ ಪಳಗಿದ್ದ ಈತನ ಮೇಲೆ ಅಲ್ಲಿಯೂ ಕೇಸ್ ದಾಖಲಾಗಿತ್ತು. ಅಲ್ಲಿಯೂ ಈತ ಇಬ್ಬರು ಹೆಂಡತಿಯರನ್ನು ಹೊಂದಿದ್ದ. ನಂತರ ಅವರನ್ನು ತೊರೆದು 9 ವರ್ಷಗಳ ಹಿಂದಷ್ಟೇ ಊರಿಗೆ ಬಂದು ತಮಿಳ್ನಾಡು ಮೂಲದ ಬೇಲಾ ಹಾಗೂ ಜಯಂತಿ ಎಂಬವರನ್ನು ಮದುವೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

999p

By Suddi9

Leave a Reply

Your email address will not be published. Required fields are marked *