ಮೂಡುಬಿದಿರೆ :ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಜೋಡಿಯೊಂದು ವಿವಾಹವಾಗಿ ಪ್ರತ್ಯಕ್ಷವಾದ ಪ್ರಕರಣವು ಕಲ್ಲಮುಂಡ್ಕೂರಿನಲ್ಲಿ ಭಾನುವಾರ ನಡೆದಿದ್ದು ಪೊಲೀಸರ ಹುಡುಕಾಟದ ಕೆಲಸವು ಈ ಮೂಲಕ ಮುಗಿದಿದೆ.
ಇದೀಗ ವಿವಾಹವಾಗಿ ಪ್ರತ್ಯಕ್ಷವಾಗಿರುವ ಜೋಡಿಯನ್ನು ಕಲ್ಲಮುಂಡ್ಕೂರಿನ ನಿವಾಸಿ ವಾಲಗ ವೃತ್ತಿಯ ಸತೀಶ ಹಾಗೂ ತೋಡಾರಿನ ನಿವಾಸಿ ಪದವೀಧರೆ ಯುವತಿ ಎಂದು ಗುರುತಿಸಲಾಗಿದ್ದು ಇವರಿಬ್ಬರೂ ಮೂಡುಬಿದಿರೆ ಪೊಲೀಸ್ ಠಾಣೆಗೆ ತೆರಳುವ ಮೂಲಕ ನಾಪತ್ತೆ ಪ್ರಕರಣಕ್ಕೆ ತೆರೆಯನ್ನು ಎಳೆದಿದ್ದಾರೆ.

ಪ್ರಕರಣದ ಹಿನ್ನಲೆ : ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಈ ಜೋಡಿಯು ನಂತರ ಉಡುಪಿಯಿಂದ ಮೂಲ್ಕಿವರೆಗೆ ಆಗಮಿಸಿ ಮತ್ತೆ ಟ್ಯಾಕ್ಸಿ ಮೂಲಕ ಕಲ್ಲಮುಂಡ್ಕೂರಿಗೆ ಆಗಮಿಸಿದ್ದು ಟ್ಯಾಕ್ಸಿಯಲ್ಲಿ 10 ರೂ ಮುಖಬೆಲೆಯ ನೋಟ್‍ನ ಮೇಲೆ ಆತ್ಮಹತ್ಯೆಯನ್ನು ಮಾಡುವುದಾಗಿ ಸುಳಿವು ನೀಡಿ ಮತ್ತು ಯುವಕನೋರ್ವನ ಹೆಸರನ್ನು ನಮೂದಿಸಿ ತಮ್ಮ ಆತ್ಯಹತ್ಯೆಗೆ ಈತನೇ ಕಾರಣವೆಂದು ಬರೆದು ಮೊಬೈಲ್‍ಗೆ ಸುತ್ತಿ ಬಿಟ್ಟು ಹೋಗಿದ್ದು ಪಿದಮಲೆಯ ಕಾಡಿನಲ್ಲಿ ನಾಪತ್ತೆಯಾಗಿದ್ದರು.
ಆತ್ಮಹತ್ಯೆಯ ಸುಳಿವು ನೀಡಿ ನಾಪತ್ತೆಯಾಗಿದ್ದ ಈ ಜೋಡಿಯು ಪೊಲೀಸರ ಪ್ರಕರಣದ ದಿಕ್ಕನ್ನು ತಪ್ಪಿಸಲು ಪಿದಮಲೆಯ ಕಾಡಿನಲ್ಲಿರುವ ಬಗ್ಗೆ ನಾಟಕವಾಡಿದ್ದರು. ಆದರೆ ಇದೀಗ ತಾವು ಮುರುಡೇಶ್ವರ ದೇವಾಸ್ಥಾನದಲ್ಲಿ ಮದುವೆಯಾಗಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದು ಅವರು ಹೇಗೆ, ಯಾವ ವಾಹನದಲ್ಲಿ ಮುರುಡೇಶ್ವರಕ್ಕೆ ತೆರಳಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
