ಮೂಡುಬಿದಿರೆ: ಬರದ ಛಾಯೆ ಕರಾವಳಿಯಲ್ಲಿ ಗೋಚರಿಸುತ್ತಿದೆ. ಮನೆಗಳಲ್ಲಿ ನೀರಿನ ಕೊರತೆ ಮಾತ್ರವಲ್ಲ, ಕೆಲವು ಕಡೆ ಆರಾಧನ ಕೇಂದ್ರಗಳಲ್ಲೂ ನೀರಿನ ಅಭಾವ ಕಂಡುಬರುತ್ತಿದೆ. ಧರೆಗುಡ್ಡೆಯ ದೇವಳವೊಂದಕ್ಕೆ ಬರದ ಪ್ರಭಾವ ಬಾಧಿಸಲ್ಲ. ಮೂರು ನೀರಿನ ಕುಂಡಗಳಿಂದಲೇ ಇಡೀ ದೇವಸ್ಥಾನದ ದೈನಂದಿನ ಉಪಯೋಗ ಹಾಗೂ ಇಲ್ಲಿಗೆ ಬರುವ ಭಕ್ತರಿಗೆ ಕುಡಿಯುವ ನೀರಾಗಿ ತಣಿಸುತ್ತಿದೆ.

 

Daregudde Somanatheshwara temple (1)

Daregudde Somanatheshwara temple (2)

Daregudde Somanatheshwara temple (3)

Daregudde Somanatheshwara temple (8)

Daregudde Somanatheshwara temple (7)

Daregudde Somanatheshwara temple (6)

Daregudde Somanatheshwara temple (5)

Daregudde Somanatheshwara temple (4)

 

ಎರಡೂವರೆ ಫೀಟ್ ಕುಂಡಗಳಲ್ಲಿ ಬತ್ತದ ನೀರು:
9 ಗ್ರಾಮಗಳನ್ನು ಒಳಗೊಂಡಿರುವ ಪಣಪಿಲ ಅರಮನೆಯ ಕೊನ್ನಾರ ಮಾಗಣೆಗೆ ಸಂಬಂಧಪಟ್ಟ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಇಂತಹದೊಂದು ಪ್ರಕೃತಿಯ ವಿಸ್ಮಯವಿದೆ. ಧರೆಗುಡ್ಡೆಯ ವಿಠಲ ಎನ್ನುವ ಪ್ರದೇಶದಲ್ಲಿ ಪ್ರಕೃತಿ ಸೊಬಗಿನ ತಪ್ಪಲಿನಲ್ಲಿರುವ ಈ ದೇವಳವು ಹಲವು ವಿಶೇಷತೆಗಳನ್ನು ಹೊಂದಿದ್ದು, ದೇವಸ್ಥಾನ ಆವರಣದಲ್ಲಿ ಮೂರು ಕುಂಡಗಳಲ್ಲಿ ನೂರಾರು ವರ್ಷಗಳಿಂದ ನೀರು ಬರಿದಾಗಿಲ್ಲ. ಹೆಚ್ಚು ಮಳೆ ಬಂದರೂ ಈ ಕುಂಡಗಳಲ್ಲಿ ನೀರು ಹೆಚ್ಚಾಗದು, ಬರ ಬಂದರೂ ನೀರು ಕಡಿಮೆಯಾಗದಿರುವುದು ಈ ಕುಂಡಗಳ ವಿಶೇಷ. ಎರಡೂವರೆ ಫೀಟ್ ಇರುವ ಈ ಮೂರು ಸಣ್ಣ ನೀರಿನ ಕುಂಡಗಳಲ್ಲಿ ನೀರು ಬತ್ತಿದ ಇತಿಹಾಸವೇ ಇಲ್ಲ.
ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಯಾವುದೇ ಬಾವಿಯಾಗಲಿ, ಕೊಳವೆಬಾವಿಯಾಗಲಿ ಇಲ್ಲದಿದ್ದು, ಕುಂಡದ ನೀರನ್ನೇ ದೇವಳದಲ್ಲಿ ಉಪಯೋಗಿಸಲಾಗುತ್ತಿದೆ. ಈ ಮೂರು ಕುಂಡ ದೇವಸ್ಥಾನದ ಅಭಿಷೇಕ ಸಹಿತ ದೈನಂದಿನ ಪೂಜಾವಿಧಿಗಳಿಗೆ ಉಪಯೋಗವಾಗುತ್ತಿದೆ. ಜಾತ್ರೆಯ ಸಮಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ, ಕೆಲವೊಮ್ಮೆ ಹೆಚ್ಚುವರಿ ನೀರನ್ನು ಹೊರಗಿನಿಂದ ತರಲಾಗುತ್ತದೆ. ಉಳಿದಂತೆ ಸಂಕ್ರಮಣ ಅಥವಾ ಇತರ ವಿಶೇಷ ದಿನಗಳಲ್ಲಿ ಎಷ್ಟೇ ಸಂಖ್ಯೆಯ ಭಕ್ತರು ಬಂದರೂ ಈ ಕುಂಡಗಳ ನೀರೇ ಉಪಯೋಗವಾಗುತ್ತಿದೆ. ದೇವರ ಗರ್ಭಗುಡಿಯ ಸುತ್ತಲೂ ಇರುವ ಸಣ್ಣ ಕಿರುತೋಡಿನಲ್ಲೂ ನೀರು ಇರುತ್ತದೆ. ದೇವರಿಗೆ ಸೀಯಾಳಾಭಿಷೇಕ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯೂ ಭಕ್ತರಲ್ಲಿದೆ.
ಗಣಪಗೆ ನಿತ್ಯ ಜಲಾಭಿಷೇಕ:
ಇಲ್ಲಿರುವ ಗಣಪ, ಅಗ್ನಿ ಗಣಪ. ಇದು ಇತರ ದೇವಸ್ಥಾನಗಳಲ್ಲಿರುವ ಗಣಪತಿ ವಿಗ್ರಹಕ್ಕಿಂತ ಭಿನ್ನ. ಕಾಡಿನ ತುತ್ತ ತುದಿಯಿಂದ ಹರಿಯುತ್ತಿರುವ ನೀರು ದೇಗುಲದ ಬುಡಕ್ಕೆ ಬರುವ ಪ್ರದೇಶದಲ್ಲಿ ಪುರಾತನ ಗಣಪತಿ ವಿಗ್ರಹವಿದೆ. ಗಣಪನ ಮೇಲೆ ಸದಾ ನೀರಿನ ಅಭಿಷೇಕ ನೈಸರ್ಗಿಕವಾಗಿ ಆಗುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷ. ಹಿಂದೊಮ್ಮೆ ಗಣಪತಿ ವಿಗ್ರಹವನ್ನು ದೇವಸ್ಥಾನದ ಒಳಗೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇಡೀ ಊರೇ ದೇವಸ್ಥಾನದ ಬರಗಾಲಕ್ಕೆ ತುತ್ತಾಗಿದ್ದು, ಇಲ್ಲಿನ ಜನರು ಕಷ್ಟ ಅನುಭವಿಸುವಂತಾಗಿತ್ತು. ಆ ಬಳಿಕ ಮತ್ತೆ ನೀರು ಹರಿಯುವ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಏಳು ಅಡಿಯ ಶಿವಲಿಂಗ ಇಲ್ಲಿನ ವಿಶೇಷತೆಗಳಲ್ಲೊಂದು.

ಸೃಷ್ಟಿಯ ವೈಚಿತ್ರವೋ, ನಂಬಿಕೆಯ ಮೂಲವೋ ಅಥವಾ ವೈಜ್ಞಾನಿಕ ಸತ್ಯವೋ. ಇಲ್ಲಿ ನೀರೇ ಕಣ್ಣಿಗೆ ಕಾಣುವ ಕಾರಣಿಕ. ಇಲ್ಲಿ ಬಂದು ಒಂದು ಲೋಟ ತಂಪಾದ ನೀರು ಕುಡಿದರೆ ಅದರಲ್ಲಿ ಸಿಗುವ ಧನ್ಯತಾ ಭಾವ ಬೇರಾವುದರಲ್ಲೂ ಸಿಗೋದಿಲ್ಲ. ಸುತ್ತ ಬಂಡೆ ಕಲ್ಲುಗಳ ಆಲಯವಾದರೂ ನೀರು ಮಾತ್ರ ನಿರಂತರವಾಗಿ ಜಿಣುಗುತ್ತಿರುವುದು ದೇವಸ್ಥಾನದ ವಿಶೇಷ.
-ಸುನೀಲ್ ಪಣಪಿಲ, ಗ್ರಾಮಸ್ಥರು

By suddi9

Leave a Reply

Your email address will not be published. Required fields are marked *