ನವದೆಹಲಿ: ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕಿ, ಸಾಯುತ್ತಾರೆಯೇ ಹೊರತು, ಭಾರತಕ್ಕೆ ಕೆಟ್ಟದನ್ನು ಮಾಡಲು ಬಯಸುವುದಿಲ್ಲ, ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಿಎನ್ ಎನ್ ಐ ಬಿಎನ್ ಚಾನೆಲ್ಗೆ ನೀಡಿದ ಅಪರೂಪದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಸಂದರ್ಶನವನ್ನು ಫರೀದ್ ಝಖಾರಿಯಾ ಅವರು ಮಾಡಿದ್ದಾರೆ.
ಭಾರತೀಯ ಮುಸ್ಲಿಮರು ದೇಶಕ್ಕಾಗಿ ಜೀವಿಸುತ್ತಾರೆ ಮತ್ತು ಸಾಯುತ್ತಾರೆ. ಅವರೆಂದೂ ಅಲ್ಖೈದಾ ತಾಳಕ್ಕೆ ಕುಣಿಯುವುದಿಲ್ಲ. ನನ್ನ ತಿಳಿವಳಿಕೆ ಪ್ರಕಾರ, ಅಲ್ಖೈದಾ ಸಂಘಟನೆಯವರು ನಮ್ಮ ದೇಶದ ಮುಸ್ಲಿಮರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅವರ ತಾಳಕ್ಕೆ ದೇಶದ ಮುಸ್ಲಿಮರು ಹೆಜ್ಜೆ ಹಾಕುತ್ತಾರೆ ಎಂದು ಯಾರಾದರೂ ಯೋಚಿಸಿದರೆ ಅದು ಅವರ ಭ್ರಮೆಯಷ್ಟೇ ಎಂದು ಪ್ರಧಾನಿ ತಿಳಿಸಿದರು.
ಕಾಶ್ಮೀರ ಹಾಗೂ ಗುಜರಾತ್ನಲ್ಲಿನ ಮುಸ್ಲಿಮರನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಭಾರತ ಹಾಗೂ ದಕ್ಷಿಣ ಏಷ್ಯಾಗೆ ಸೇರಿದ ಭಾಗದಲ್ಲಿ ಅಲ್ ಖೈದಾದ ಶಾಖೆ ತೆರೆಯುವ ಬಗ್ಗೆ ಉಗ್ರ ಸಂಘಟನೆ ಮುಖ್ಯಸ್ಥ ಮಾಡಿದ ವಿಡಿಯೋ ಮನವಿ ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಧಾನಿ ಉತ್ತರಿಸಿದರು.
ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ದೇಶದ 17 ಕೋಟಿ ಮುಸ್ಲಿಮರಲ್ಲಿ ಅಲ್ ಖೈದಾ ಜತೆಗೆ ಸೇರಿರುವವರು ಬಹಳ ಕಡಿಮೆ ಜನ ಅಥವಾ ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಅವರ ಪ್ರಭಾವಕ್ಕೆ ಈ ಸಮುದಾಯ ಒಳಗಾಗದಿರಲು ಕಾರಣವಾದರೂ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ನಾನು ಈ ಪ್ರಶ್ನೆಗೆ ವಿಶ್ಲೇಷಣೆ ನಡೆಸುವ ಮಾನಸಿಕ ಅಥವಾ ಧಾರ್ಮಿಕ ಅಧಿಕಾರ ಹೊಂದಿಲ್ಲ ಎನ್ನುತ್ತಲೇ ಉತ್ತರಿಸಲು ಯತ್ನಿಸಿದರು.
ಇಡೀ ಜಗತ್ತಲ್ಲಿ ಮಾನವೀಯತೆಯನ್ನು ಸಮರ್ಥಿಸಿಕೊಳ್ಳಬೇಕೆ, ಬೇಡವೇ ಎಂಬ ಪ್ರಶ್ನೆ ಇದೆ. ಮಾನವೀಯತೆ ನಂಬಿದವರು ಒಗ್ಗೂಡಬೇಕೋ ಬೇಡವೋ? ಇದು ಮಾನವೀಯತೆಯ ವಿರುದ್ಧದ ಬಿಕ್ಕಟ್ಟು, ಒಂದು ದೇಶ ಅಥವಾ ಜನಾಂಗದ ವಿರುದ್ಧದ ಬಿಕ್ಕಟ್ಟಂತೂ ಖಂಡಿತ ಅಲ್ಲ. ಹಾಗಾಗಿ ನಾವು ಇದನ್ನು ಮಾನವೀಯತೆ ಮತ್ತು ಅಮಾನವೀಯತೆಯ ನಡುವಿನ ಹೋರಾಟ ಎಂಬ ಚೌಕಟ್ಟಿನಡಿ ನೋಡಬೇಕು ಎಂದು ಮೋದಿ ವಿಶ್ಲೇಷಿಸಿದರು.

