ಗುರುಪುರ : ಗುರುಪುರ ಶ್ರೀ ವೆಂಕಟರಮಣ ದೇವಳದ ಸಮೀಪ ರಾಷ್ಟರೀಯ ಹೆದ್ದಾರಿಯಲ್ಲಿ(169) ಶನಿವಾರ ದುರಸ್ತಿ ಮಾಡಲಾದ ಮೋರಿ ಕಾಮಗಾರಿ ವೇಳೆ ಅಗೆಯಲಾದ ರಸ್ತೆ ಮೇಲೆ ರಾಶಿ ಹಾಕಲಾದ ಹಸಿ ಮಣ್ಣು ಭೂಮಿಯೊಳಗೆ ಹೂತು ಹೋಗಿ ಕಳೆದ ಒಂದೂವರೆ ದಿನದಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದು, ಸೋಮವಾರ ಮಧ್ಯಾಹ್ನದವರೆಗೂ ಆಗಾಗ್ಗೆ ಟ್ರಾಫಿಕ್ ಸಮಸ್ಯೆ ಉಂಟಾಯಿತು.

ಈ ವೇಳೆ ಕೆಲವು ವಾಹನಗಳು ಪರ್ಯಾಯ ಒಳ ರಸ್ತೆ ಮೂಲಕ ಸಂಚರಿಸಿವೆ. ಸೋಮವಾರ ಮಧ್ಯಾಹ್ನ ಊರಿನ ಯುವಕರ ತಂಡವೊಂದು ಹೆದ್ದಾರಿ ಹೊಂಡಕ್ಕೆ ಒಂದು ಲೋಡ್ ಮಣ್ಣು ಸುರಿದು ಹೊಂಡ ಸಮತಟ್ಟುಗೊಳಿಸಿ, ವಾಹನ ಸಂಚಾರ ಸುಗಮಗೊಳಿಸಿದೆ.

ಮೋರಿ ಹಾಸಲಾದ ವೇಳೆ ರಸ್ತೆ ಅಗೆಯಲಾದ ಭಾಗದಲ್ಲಿ ಡಾಮರು ಅಳವಡಿಸಲಾಗುವುದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ್ದರೂ, ಸಮಯೋಚಿತವಾಗಿ ಆ ಕೆಲಸ ಮಾಡಿಲ್ಲ. ಇದರಿಂದ ಸ್ಥಳೀಯ ಕೆಲವರು ತೀವ್ರ ಬೇಸರ ವ್ಯಕ್ತಪಡಿಸಿದರೆ, ವಾಹನಿಗರು ಹೆದ್ದಾರಿ ಅಧಿಕಾರಿಗಳಿಗೆ ಛೀಮಾರಿ ಹಾಕಲಾದ ದೃಶ್ಯಗಳು ಸಾಮಾನ್ಯವಾಗಿತ್ತು. ಪಾದಚಾರಿಗಳಿಗೂ ಅತ್ತಿಂದಿತ್ತ ಸಾಗಲು ಆಗಲಿಲ್ಲ. ಪರಿಣಾಮ, ಇಲ್ಲಿ ನಿರಂತರ ಸಾಲುದ್ದು ವಾಹನ ದಟ್ಟಣಿ ಉಂಟಾಗಿದೆ. ಕೆಲವು ವಾಹನಗಳು ಆಳವಾದ ರಸ್ತೆ ಹೊಂಡದಲ್ಲಿ ಸಿಕ್ಕಿದ್ದು, ಟ್ರಾಫಿಕ್‍ಗೆ ಮತ್ತಷ್ಟು ಅಡಚಣೆ ಉಂಟಾಗಿದೆ.
