ಬಂಟ್ವಾಳ : ಸುಮಾರು 400ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಬಂಟ್ವಾಳದ ಭ.1008 ಶ್ರೀ ಆದಿನಾಥ ತೀರ್ಥಂಕರ ಜಿನ ಚೈತ್ಯಾಲಯದಲ್ಲಿ ಸುವರ್ಣಮೂರ್ತಿ ಪಂಚಕಲ್ಯಾಣವಾಗಿ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠೆಯ 50ನೇ ವಾರ್ಷಿಕೋತ್ಸವ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಂಪನ್ನಗೊಂಡಿತು.
50 ವರ್ಷಗಳಾದ ಹಿನ್ನೆಲೆಯಲ್ಲಿ ಮೇ.24ರಿಂದ 26ರವರೆಗೆ ಮೂಡುಬಿದಿರೆ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ವಿವಿಧಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತೀ ವೀ. ಹೆಗ್ಗಡೆ ಮತ್ತು ಕುಟುಂಬಸ್ಥರು ನೆರವೇರಿಸಿದರು.
ಭಾನುವಾರ ಅಷ್ಟ ದಿಕ್ಷು ಧಾಮಸಂಪ್ರೋಕ್ಷಣೆ, ನಯನೋನ್ಮಿಲನ, ಮುಖ ವಸ್ತ್ರ ಉದ್ಘಾಟನೆ, ಸಾಮೂಹಿಕ ಭಕ್ತಾಮರ ಆರಾಧನೆ, ಮಹಾಪೂಜೆ, ಧಾರ್ಮಿಕ ಸಭೆ, 108 ಕಲಶ ಅಭಿಷೇಕ,ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್, ಭಾರತೀಯ ಜೈನ್ ಮಿಲನ್ ಪ್ರಮುಖರಾದ ಸುದರ್ಶನ ಜೈನ್, ಸುಭಾಶ್ಚಂದ್ರ ಜೈನ್, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ಡಾ. ಸುದೀಪ್ ಕುಮಾರ್ ಜೈನ್ ಸಿದ್ದಕಟ್ಟೆ, ಹರ್ಷರಾಜ್ ಬಲ್ಲಾಳ್, ಭಗವಾನ್ ದಾಸ್, ಭರತ್ ಕುಮಾರ್, ಪ್ರವೀಣ್ ಕುಮಾರ್, ಅರ್ಕಕೀರ್ತಿ ಇಂದ್ರ, ಪುಷ್ಪರಾಜ ಇಂದ್ರ, ಜಯರಾಜ ಇಂದ್ರ, ಶಿಶಿರಕುಮಾರ ಇಂದ್ರ ಸೇರಿದಂತೆ ಪುರೋಹಿತ ವರ್ಗ, ಜೈನ ಧರ್ಮದ ವಿವಿಧ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.

