ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಾಲಯದಲ್ಲಿ ಭಕ್ತರು ಪ್ರತೀ ವರ್ಷ ಆಷಾಢ ಮಾಸದಲ್ಲಿ ಆಟಿ ಅಮಾವಾಸ್ಯೆ ದಿನ ತೀರ್ಥಸ್ನಾನ ಮಾಡುವ ಪವಿತ್ರ ಗದಾತೀರ್ಥ ಕೆರೆಯಲ್ಲಿ ಕಳೆದ ಹಲವು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಪಾಚಿ ಶುಚಿಗೊಳಿಸುವ ಕಾರ್ಯ ಭರದಿಂದ ಆರಂಭಗೊಂಡಿದೆ.
ಬಿ.ಸಿ.ರೋಡು- ಪುಂಜಾಲಕಟ್ಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಬಳಸಲು ಕಳೆದ ಹಲವು ಸಮಯದಿಂದ ಖಾಸಗಿ ಗುತ್ತಿಗೆ ಸಂಸ್ಥೆಯು ಪಂಪ್ ಮೂಲಕ ನೀರು ಮೇಲೆತ್ತಿ ಟ್ಯಾಂಕರ್ ಮೂಲಕ ದಿನವಿಡೀ ಸದ್ದಿಲ್ಲದೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಚಿತ್ರ ಸಹಿತ ಸಂದೇಶವೊಂದು ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಸುದ್ದಿಗೆ ಗ್ರಾಸವಾಗಿತ್ತು.

15btl-Gadathirtha
ಗದಾತೀರ್ಥ ಕೆರೆ ಹಿನ್ನೆಲೆ:
ಇಲ್ಲಿನ ಶಿವ ದೇವಾಲಯ ಎತ್ತರದ ಬಂಡೆ ಮೇಲಿದ್ದರೆ, ಪಾರ್ವತಿ ದೇವಾಲಯ ಬಂಡೆಯ ಮಧ್ಯೆ ಭಾಗದಲ್ಲಿದೆ. ಪ್ರತೀ ವರ್ಷ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಉತ್ಸವ ಮೂರ್ತಿಗಳ ಮೂಲಕ ಪಾರ್ವತೀ-ಪರಮೇಶ್ವರರ ಭೇಟಿ ದೃಶ್ಯ ವೀಕ್ಷಿಸಲು ಸಹಸ್ರಾರು ಮಂದಿ ಭಕ್ತರು ಆಗಮಿಸುತ್ತಾರೆ. ದ್ವಾಪರಾಯುಗದಲ್ಲಿ ಭೀಮಸೇನನು ಇಲ್ಲಿನ ಬಂಡೆಯಲ್ಲಿ ಮೊಣಕಾಲೂರಿದ ಜಾಗ ‘ಜಾನು ತೀರ್ಥ’, ಉಂಗುಷ್ಠ ಊರಿದ ಜಾಗ ‘ಉಂಗುಷ್ಠ ತೀರ್ಥ’ ಮತ್ತು ಗದೆ ಎಸೆದ ಜಾಗ ‘ಗದಾ ತೀರ್ಥ’ ಕೆರೆ ಆಗಿದೆ ಎಂಬ ಪ್ರತೀತಿ ಇದೆ. ಈ ಗದಾತೀರ್ಥ ಕೆರೆ ಬಂಡೆಯ ಕೆಳಭಾಗ ಮತ್ತು ರಸ್ತೆ ಬದಿಯಲ್ಲಿದೆ. ಕಳೆದ 25 ವರ್ಷಗಳ ಹಿಂದೆ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಸೂಚನೆಯಂತೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೆರೆ ಅಭಿವೃದ್ಧಿಪಡಿಸಲಾಗಿದೆ. ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆಯಡಿ ಕ್ಷೇತ್ರಕ್ಕೆ ರೂ 65ಲಕ್ಷ ವೆಚ್ಚದ ರಸ್ತೆಯೂ ನಿರ್ಮಾಣಗೊಂಡಿದೆ. ಸುಮಾರು 600 ಅಡಿ ಉದ್ದ ಮತ್ತು 150 ಅಡಿ ಅಗಲ ಹೊಂದಿರುವ ಗದಾತೀರ್ಥ ಕೆರೆ 25 ಅಡಿ ಆಳ ಹೊಂದಿದೆ. ಈ ಕೆರೆಯಲ್ಲಿ ಎಂದಿಗೂ ನೀರು ಕಡಿಮೆಯಾಗದಿರುವ ಹಿನ್ನೆಲೆಯಲ್ಲಿ ಶುಚಿಗೊಳಿಸಲು ಸಾಧ್ಯವಾಗಿಲ್ಲ. ಇದೀಗ ಬಿ.ಸಿ.ರೋಡು-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಟ್ಯಾಂಕರ್ ಮೂಲಕ ನೀರು ಮೇಲೆತ್ತಿ ರಸ್ತೆಗೆ ಉಪಯೋಗಿಸುವುದರ ಜೊತೆಗೆ ತೀರ್ಥಕೆರೆ ಅಭಿವೃದ್ಧಿಗೊಳಿಸುವ ಭರವಸೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ದೋಣಿ ಮೂಲಕ ಹಲವು ಮಂದಿ ಕಾರ್ಮಿಕರು ಸುಮಾರು 2 ಲೋಡು ಪಾಚಿ ಮತ್ತಿತರ ಕಸಕಡ್ಡಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಶೀಘ್ರವೇ ಕೆರೆಯ ಬದಿ ಕುಸಿದು ಬಿದ್ದಿರುವ ಮೆಟ್ಟಿಲು ಮತ್ತು ಕಟ್ಟೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಜಿನರಾಜ ಅರಿಗ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

15btl-Karinja

ಸಾರ್ವಜನಿಕ ಕೆರೆ ಮತ್ತು ತೀರ್ಥಕೆರೆ ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲು ಉದ್ಯೋಗ ಖಾತರಿ ಯೋಜನೆಯಡಿ ಅವಕಾಶವಿದೆ. ಈ ಬಾರಿ ಕ್ರಿಯಾಯೋಜನೆ ಸಿದ್ಧಪಡಿಸದಿರುವ ಹಿನ್ನೆಲೆಯಲ್ಲಿ ಅನುದಾನ ಸಿಕ್ಕಿಲ್ಲ. ಇದಕ್ಕಾಗಿ ಮಳೆಗಾಲಕ್ಕೆ ಮೊದಲು ತೀರ್ಥಕೆರೆ ಸ್ವಚ್ಛಗೊಳಿಸುವ ಕಾರ್ಯ ನಡೆಯಬೇಕಿದೆ.
-ವೇದವ ಪಿಡಿಒ, ಕಾವಳಪಡೂರು ಗ್ರಾಮ ಪಂಚಾಯಿತಿ.

By suddi9

Leave a Reply

Your email address will not be published. Required fields are marked *