ಬಂಟ್ವಾಳ:ನರೇಗಾ ಯೋಜನೆಯಡಿ ಬಂಟ್ವಾಳ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿಯಾಗದ ಹಿನ್ನಲೆಯಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಹಾಗೂ ಉಪಕಾರ್ಯದರ್ಶಿ ಮಹೇಶ್ ಅವರು ಪಿಡಿಒಗಳ ಕಾರ್ಯವೈಖರಿಯ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ. ಬುಧವಾರ ಬಂಟ್ವಾಳ ತಾಲೂಕು ಪಂಚಾಯಿತ್ ನ ಎಸ್ ಜಿಎಸ್ ಆರ್ ವೈ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಗತಿ ಸಾಧಿಸದ ಪಿಡಿಓಗಳಿಗೆ ಅವರು ಕ್ಲಾಸ್ ತೆಗೆದುಕೊಂಡರು.
ನರೇಗ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ವರದಿ ಪಡೆದ ಸಿಇಓ ಅವರು ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಬಂಟ್ವಾಳ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದ ಪ್ರಗತಿ ನಡೆದಿಲ್ಲ, ಪ್ರಗತಿ ಕಾಮಗಾರಿಗಳ ಬಗ್ಗೆ ಸರಿಯಾದ ಯೋಜನೆ ರೂಪಿಸಿಲ್ಲ ಎಂದು ತರಾಟೆಗೂ ತೆಗೆದು ಕೊಂಡರು. ೧೯ ಗ್ರಾಮ ಪಂಚಾಯಿತಿಗಳು ಶೇ.೫೦ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿದ್ದು ಪ್ರತೀ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಂದ ಪ್ರಗತಿ ಹಿನ್ನಡೆಯಾಗಿರುವ ಬಗ್ಗೆ ಕಾರಣ ತಿಳಿದುಕೊಂಡ ಅವರು ದ.ಕ. ಜಿಲ್ಲೆಯಲ್ಲಿ ಮಂಗಳೂರು ಶೇ.೭೯, ಬಂಟ್ವಾಳ, ಬೆಳ್ತಂಗಡಿ ಶೇ.೩೫, ಸುಳ್ಯ, ಪುತ್ತೂರು ಶೇ. ೪೫ ಪ್ರಗತಿ ಸಾಧಿಸಿದೆ ಎಂದರು.

1
ಬಂಟ್ವಾಳ ತಾಲೂಕಿನ ೫೮ ಗ್ರಾ.ಪಂ.ಗಳ ಪೈಕಿ ೫೧ ಗ್ರಾ.ಪಂ.ಗಳಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳಾಗಿದೆ. ಉಳಿದ ಏಳು ಗ್ರಾಮ ಪಂಚಾಯತ್‌ಗಳಾದ ಅಮ್ಮುಂಜೆ, ಬೋಳಂತೂರು, ಕರಿಯಂಗಳ, ಮೇರಮಜಲು, ನೆಟ್ಲಮುಡ್ನೂರು, ಸಜೀಪಮುನ್ನೂರು, ಸಜೀಪ ಪಡು ಗ್ರಾ.ಪಂ.ಗಳಲ್ಲಿ ನೀರಿಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲ ಎಂದು ಗರಂ ಆದ ಸಿಇಓ ಕೆಲ ಗ್ರಾಪಂ ವ್ಯಾಪ್ತಿಯಿಂದ ಸಾರ್ವಜನಿಕರು,ಜನಪ್ರತಿನಿಧಿಗಳು ಕರೆ ಮಾಡಿ ನರೇಗಾದಲ್ಲಿ ಕೆಲಸ ಕೊಡಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದರಲ್ಲದೆ ಒಂದು ವಾರದೊಳಗಾಗಿ ೧೦ ಹೊಸ ಕಾಮಗಾರಿಗಳನ್ನು ಗುರುತಿಸಿ ಜಿಲ್ಲಾ ಪಂಚಾಯಿತಿಗೆ ವರದಿ ನೀಡುವಂತೆ ಪಿಡಿಓಗಳಿಗೆ ಸೂಚಿಸಿದರು.
ಅಪೂರ್ಣವಾಗಿರುವ ಚೆಕ್‌ಡ್ಯಾಂಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು, ೩೬ ಅಂಗನವಾಡಿ ಕಟ್ಟಡಗಳ ಪೈಕಿ ೨೯ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ. ನೀರಿನ ಸಮಸ್ಯೆಯಿಂದ ಕಟ್ಟಡ ನಿರ್ಮಾಣ ಬಾಕಿ ಉಳಿದಿರುವ ಅಂಗನವಾಡಿ ಕೇಂದ್ರಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಡಾ. ಸೆಲ್ವಮಣಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ೨೦೧೬-೧೭ನೇ ಸಾಲಿನಲ್ಲಿ ಆರಂಭಗೊಂಡ ಅಂಗನವಾಡಿ ಕೇಂದ್ರದ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರ ಇನ್ನೂ ಪೂರ್ಣಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಅಂಗನವಾಡಿ ಕಟ್ಟುತ್ತಿದ್ದಿರೋ ಅರಮನೆ ಕಟ್ಟುತ್ತಿದ್ದಿರೋ ಎಂದುಸ್ಥಳೀಯ ಪಂಚಾಯತ್ ನ ಪಿಡಿಒರನ್ನು ತರಾಟೆಗೆ ತೆಗೆದುಕೊಂಡರು.
ಹಣದ ಸಮಸ್ಯೆ ಇಲ್ಲ: ತುರ್ತು ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ ಯಾವುದೇ ಮೂಲಗಳಿಂದ ನೀರು ಪೂರೈಸುವುದಕ್ಕೆ ಹಣದ ಕೊರತೆ ಇಲ್ಲ ಎಂದ ಸಿಇಒ ಸೆಲ್ವಮಣಿ ಅವರು ಬೋರ್ ವೆಲ್ ಕೊರೆಯುವುದು,ದುರಸ್ಥಿ,ಪ್ಲಶ್ಶಿಂಗ್ ಮಾಡುವುದಕ್ಕೂ ಅನುದಾನ ಒದಗಿಸಲಾಗುವುದು ಎಂದು ಇಒರವರಿಗೆ ಸೂಚಿಸಿದರು.ಸದ್ಯ ತಾಲೂಕಿನ ನರಿಂಗಾನ ಮತ್ತು ಬಾಳೆಪುಣಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಇಒ ರಾಜಣ್ಣ ಮಾಹಿತಿ ನೀಡಿದರು. ಕುಕ್ಕಿಪ್ಪಾಡಿಯಲ್ಲು ನೀರು ಡ್ರೈ ಆಗಿದೆ ಎಂದು ಪಿಡಿಒರವರು ಸಭೆಯ ಗಮನಸೆಳದಿದ್ದು,ಇಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹೇಶ್, ನೆರವು ಘಟಕದ ಮಂಜುಳಾ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಉಪಸ್ಥಿತರಿದ್ದರು, ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನ ಇಲಾಖೆ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಪಂಚಾಯಿತಿ ಪಿಡಿಓಗಳು ಹಾಜರಿದ್ದರು.

By suddi9

Leave a Reply

Your email address will not be published. Required fields are marked *