ಬಂಟ್ವಾಳ: ಹಾಡುಹಗಲೇ ಕಾಡಿನಿಂದ ನಾಡಿಗೆ ಬಂದ ಕಾಡುಕೋಣದ ದಾಳಿಗೆ ಬಾಲಕಿ ಹಾಗೂ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾ.ನ ಕಾಡಬೆಟ್ಟು ಕಂದಾಡಿ ಎಂಬಲ್ಲಿ ನಡೆದಿದೆ.ಕಂದಾಡಿ ನಿವಾಸಿ ರಾಮ ನಾಯ್ಕ ಹಾಗೂ ಲಲಿತಾ ದಂಪತಿಯ ಪುತ್ರಿ ಹರ್ಷಾ (12) ಬಾಲಕಿಯ ಚಿಕ್ಕಮ್ಮ ಅಂಗನವಾಡಿ ಕಾರ್ಯಕರ್ತೆ ಕು. ಚಂದ್ರಾವತಿ ಕಾಡುಕೋಣದ ತಿವಿತಕ್ಕೆ ಗಾಯಗೊಂಡವರಾಗಿದ್ದಾರೆ.
ಬಂಟ್ವಾಳ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಪಾಸು ಮನೆಯ ಕಡೆಗೆ ತೆರಳುತ್ತಿದ್ದ ವೇಳೆ ಕಾಡಬೆಟ್ಟುವಿನ ಕಂದಾಡಿ ಎಂಬಲ್ಲಿ ರಸ್ತೆಯಲ್ಲಿ ಹಠಾತ್ತನೆ ಪ್ರತ್ಯಕ್ಷಗೊಂಡ ಕಾಡುಕೋಣ ಬಾಲಕಿ ಮತ್ತು ಮಹಿಳೆಯ ಮೇಲೆ ಎರಗಿ ಗಾಯಗೊಳಿಸಿದೆ.ಕಾಡುಕೋಣನ ರೌದ್ರಾವತಾರಕ್ಕೆ ಬಾಲಕಿಯ ಕೈ ಮುರಿದಿದ್ದು, ಮಹಿಳೆಯ ಮೈ ಹಾಗೂ ದೇಹದ ಇತರ ಭಾಗದಲ್ಲಿ ಗಾಯಗಳಾಗಿದೆ.ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಬಳಿಕ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ.
ಘಟನೆಯ ವಿವರ: ಕಾಡಬೆಟ್ಟು ಗ್ರಾಮದ ಪೊರ್ಲೊಟ್ಟು ನಿವಾಸಿ ವಿಲ್ಪ್ರೆಡ್ ಡಿಸೋಜ ಅವರ ಗೋಬರ್ ಗ್ಯಾಸ್ ನ ಗುಂಡಿಗೆ ಶನಿವಾರ ಮುಂಜಾನೆ ಕಾಡುಕೋಣವೊಂದು ಬಿದ್ದು ಮೇಲೆ ಬರಲಾಗದೆ ಗುಂಡಿಯೊಳಗೆ ಸಿಲುಕಿ ಒದ್ದಾಡುತ್ತಿತ್ತು.ಬೆಳಿಗ್ಗೆ ಗೋಬರ್ ಗ್ಯಾಸ್ ಗುಂಡಿಗೆ ಗೊಬ್ಬರ ಹಾಕಲು ಬಂದಾಗ ಗುಂಡಿಯಲ್ಲಿ ಕಾಡುಕೋಣ ಇರುವುದು ಕಂಡು ಬಂದಿತ್ತು.ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು,ಸ್ಥಳಕ್ಕಾಗಮಿಸಿದ ಬಂಟ್ವಾಳ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಸುರೇಶ್ ಮತ್ತವರ ಸಿಬಂದಿಗಳು ಸ್ಥಳೀಯರ ಸಹಕಾರದಿಂದನಿರಂತರ ಮೂರು ತಾಸುಗಳ ಕಾಲ ಜೆಸಿಬಿ ಮೂಲಕ ಕಾರ್ಯಚರಣೆ ನಡೆಸಿ ಗುಂಡಿಯಿಂದ ಮೇಲಕ್ಕೆರುತ್ತಿದ್ದಂತೆ ಕಾಡುಕೋಣ ಬದುಕಿದೆಯ ಬಡಜೀವವೇ ಎಂದು ಅಲ್ಲಿಂದ ಹಾರಿ ಕಾಡಿನತ್ತ ಓಡಿಹೋಯಿತು.
ಇದಾದ ಕೆಲ ಹೊತ್ತಿನಲ್ಲಿ ಕಾಡಿನಿಂದ ವಾಪಾಸು ಬಂದ ಕಾಡುಕೋಣ ರಸ್ತೆಯಲ್ಲಿ ಮನೆಯತ್ತ ತೆರಳುತ್ತಿದ್ದ ಚಂದ್ರಾವತಿ ಹಾಗೂ ಬಾಲಕಿ ಹರ್ಷಾರ ಮೇಲೆ ಎರಗಿದೆ. ಪರಿಣಾಮ ಇವರಿಬ್ಬರುಗಾಯಗೊಂಡಿದ್ದಾರೆ. ಗುಂಡಿಯಲ್ಲಿ ಒದ್ದಾಡುತ್ತಿದ್ದ ಕಾಡು ಕೋಣವನ್ನು ನೋಡಲುಕುತೂಹಲಿಗರ ದಂಡು ತಂಡೋಪವಾಗಿ ಬಂದರು, ಸ್ಥಳದಲ್ಲಿ ಸೇರಿದ್ದ ಜನರನ್ನು ನೋಡಿ ಕಾಡುಕೋಣ ನಿಯಂತ್ರಣ ಕಳೆದುಕೊಂಡ ರೀತಿಯಲ್ಲಿ ವರ್ತಿಸುತ್ತಿತ್ತು.ಗುಂಡಿಗೆ ಬಿದ್ದ ಕಾಡುಕೋಣದ ಬೆನ್ನು ಮೇಲೆ ಗಾಯವಾಗಿದ್ದು,ಬೆನ್ನ ಮೇಲಿನಗಾಯಕ್ಕೆ ಗುಂಡಿಯೊಳಗೆ ಇರುವಾಗಲೇ ವಗ್ಗದ ಪಶು ವೈದ್ಯಾಧಿಕಾರಿ ಚಿಕಿತ್ಸೆ ನೀಡಿದ್ದರು. ರಾತ್ರಿ ಹೊತ್ತಿನಲ್ಲಿ ಕಾಡಿನಿಂದ ಬಂದಿದ್ದ ಈ ಕಾಡುಕೋಣ ಗೊಬ್ಬರದ ಗುಂಡಿಯ ಮೇಲೆ ಹಾಕಲಾಗಿದ್ದ ರಟ್ಟಿನ ಶೀಟು ಗೊತ್ತಾಗದೆ ನಡೆದುಕೊಂಡು ಹೋಗುವಾಗ ರಟ್ಟು ಮುರಿದು ಕಾಡು ಕೋಣ ಗುಂಡಿಯಳಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.ಅರಣ್ಯ ಇಲಾಖೆಯ ಸಿಬ್ಬಂದಿ ಗಳಾದ ವಿನಯ್, ಬಾಸ್ಕರ್, ಸ್ಮಿತಾ, ಅನಿತಾ ಅನಿಲ್ ಹಾಗೂ ಪರಿಸರ ಸ್ನೇಹಿ ಕಿರಣ್ ಪಿಂಟೋ ಕಾಡು ಕೋಣದ ರಕ್ಷಣೆಯಲ್ಲಿ ಭಾಗಿಯಾಗಿದ್ದರು.

