ಕೈಕಂಬ:ಶ್ರೀಕ್ಷೇತ್ರಕ್ಕೆ ಕುಪ್ಪೆಪದವು-ಎಡಪದವು-ಗುರುಪುರ-ಕೈಕಂಬ, ಮಳಲಿ, ಗಂಜಿಮಠ ಮುಂತಾದ ಕಡೆಗಳಿಂದ ಹೊರೆಕಾಣಿಗೆ ಆಗಮಿಸಿತು. ಭಕ್ತರು ತನ್ನ ಕೈಲಾದ ಕಾಣಿಕೆಗಳನ್ನು ಅರ್ಪಿಸಿ ಪುನೀತರಾದರು. ವಿವಿಧ ಭಜನಾ ತಂಡಗಳಿಂದ ಭಜನೆ, ವಾದ್ಯ-ಘೋಷ, ಬ್ಯಾಂಡ್-ಚೆಂಡೆವಾದನಗಳೊಂದಿಗೆ ಹಲವಾರು ಅಲಂಕೃತ ವಾಹನಗಳೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಗುರುಪುರ ಕೈಕಂಬದ ಪೊಳಲಿ ದ್ವಾರದ ಬಳಿ ಒಂದುಗೂಡಿ ಹೊರಕಾಣಿಕೆಯನ್ನು ತಂದು ದೇವಸ್ಥಾನಕ್ಕೆ ಅರ್ಪಿಸಲಾಯಿತು.
ಬ್ರಹ್ಮಕಲಶೋತ್ಸವಕ್ಕೆ ಅವಶ್ಯವಾಗಿರುವ ಅಕ್ಕಿ, ಅಕ್ಕಿಮುಡಿ, ವಿವಿಧ ತರಕಾರಿಗಳು, ಬಾಳೆ ಎಲೆ, ತೆಂಗಿನಕಾಯಿ, ಅಡಿಕೆ, ಫಲವಸ್ತುಗಳು, ಅಡಿಗೆ ಸಾಮಗ್ರಿಗಳು ಮುಂತಾದ ವಸ್ತುಗಳು ನೂರಾರು ವಾಹನಗಳ ತುಂಬ ಆಗಮಿಸಿದೆ. ರಾಜ್ಯದ ಅನೇಕ ಊರುಗಳಿಂದ ಹೊರೆಕಾಣಿಗೆ ಬರಲಿದೆ. ಈಗಾಗಲೇ ಉಗ್ರಾಣವು ಹೊರೆಕಾಣಿಗಳಿಂದ ತುಂಬಿತುಳುಕುತ್ತಿದೆ.

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ವಿವಿಧ ವೈದಿಕ-ಧಾರ್ಮಿಕ ವಿಧಿವಿಧಾನಗಳು ಇಂದಿನಿಂದ(ಮಾ.4) ಆರಂಭಗೊಂಡಿದ್ದು, ಎಲ್ಲೆಡೆ ಸಂಭ್ರಮ ಕಳೆಗಟ್ಟಿದೆ.
ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಿನ್ನೆ ಬೆಳಿಗ್ಗಿನಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ಮೃಣ್ಮಯ ಮೂರ್ತಿಗಳ
ದಿವ್ಯದರ್ಶನ ಪಡೆದು ಪುನೀತರಾದರು.

ಎರಡು ವರ್ಷಗಳಿಂದ ಪೊಳಲಿ ದೇವಸ್ಥಾನದ ನವೀಕರಣ ಪ್ರಕ್ರಿಯೆ ನಡೆದು ಕೆಲಸ ಪೂರ್ಣಗೊಂಡಿದೆ. ದೇವರ ಅಭಿಮಾನಿ ಮೂರ್ತಿಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಅಲ್ಲಿಯೇ ಪೂಜಾಕೈಂಕರ್ಯ ನಡೆಸಲಾಗುತ್ತಿದೆ. ದೇವರ ಲೇಪಾಷ್ಠಬಂಧ ಪೂರ್ಣಗೊಳಿಸಿ ಸೋಮವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಎರಡು ವರ್ಷಗಳಿಂದ ದೇವರ ಮೃಣ್ಮಯ ದಿವ್ಯಮೂರ್ತಿಯ ದರ್ಶನಗೈಯ್ಯಲು ಹಾತೊರೆಯುತ್ತಿದ್ದ ಭಕ್ತರು ಬೆಳಿಗ್ಗೆ ದೇವರ ದರ್ಶನವಾಗುತ್ತಿದ್ದಂತೆ ಆಧ್ಯಾತ್ಮಕ-ಸಾತ್ವಿಕ ದಿವ್ಯಾನಂದ ಅಸನುಭವಿಸಿದರು. ಸರದಿ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದೇವರನ್ನು ತನ್ನ ಕಣ್ತುಂಬಿಕೊಂಡರು.






