ಪೊಳಲಿ: ಇಂದಿನಿಂದ ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ಆರಂಭ; ದೇವರ ದರ್ಶನದಿಂದ ಪಾವನರಾದ ಭಕ್ತರು
ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂಜಾವಿಧಿವಿಧಾನ-ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಈಗಾಗಲೇ ಮುಂಜಾನೆ ಹಲವು ವೈದಿಕ ವಿಧಾನಗಳನ್ನು ಪೂರೈಸಲಾಗಿದ್ದು ಸಾವಿರಾರು ಭಕ್ತರು ಬೆಳಗ್ಗಿನಿಂದಲೇ ದೇವಸ್ಥಾನದತ್ತ ಆಗಮಿಸಲಾಸರಂಭಿಸಿದ್ದಾರೆ.
ಸೋಮವಾರ ಬೆಳಿಗ್ಗೆ 8.30ರ ಶುಭ ಮಹೂರ್ತದಲ್ಲಿ ಆಚರ್ಯಾದಿ ಋತಿಜ್ವಯರಿಗೆ ಸ್ವಾಗತಿಸಲಾಯಿತು. ಪೊಳಲಿಯ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ ಹಾಗು ವೆಂಕಟೇಶ ತಂತ್ರಿಯವರು ಸೇರಿ ತಂತ್ರಿವರ್ಯರನ್ನು ಅವರ ಮನೆಯಿಂದ ಪೊಳಲಿಯ ಆಡಳಿತ ಸಮಿತಿ, ಮೊಕ್ತೇಸರ ವೃಂದದವರ ವತಿಯಿಂದ ಅದ್ಧೂರಿ ರೀತಿಯಲ್ಲಿ ಸ್ವಾಗತಿಸಲಾಯಿತು. ಈ ವೇಳೆ ಧ್ವಜಸ್ತಂಭದ ಚಿನ್ನದ ಲೇಪಿತ ನವಿಲಿನ ಮೂರ್ತಿಯನ್ನು ಧಾರ್ಮಿಕ ಪದ್ಧತಿಯಂತೆ ತಂದು ಪೂಜೆ ಸಲ್ಲಿಸಲಾಯಿತು.
ತಂತ್ರಿವರ್ಯರ ಆಗಮನದ ಬಳಿಕ ಶ್ರೀರಾಜರಾಜೇಶ್ವರಿ-ಪರಿವಾರ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ವೇದ ಪುರೋಹಿತರು ಸ್ವಸ್ತಿ ಪುಣ್ಯಹವಾಚನಗೈದರು. ಇದಾದ ಬಳಿಕ ನಾಂದಿ, ಋತ್ವಿಗ್ವರಣ, ಕಂಕಣ ಬಂಧ ನಡೆಸಿ, ಆದ್ಯಗಣಯಾಗ ನೆರವೇರಿಸಲಾಯಿತು. ಪುರೋಹಿತರು ವೇದಪಾರಾಯಣ ನಡೆಸಿದರು.
ಎರಡು ವರ್ಷಗಳಿಂದ ಪೊಳಲಿ ದೇವಸ್ಥಾನದ ನವೀಕರಣ ಪ್ರಕ್ರಿಯೆ ನಡೆದು ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವರ ಲೇಪಾಷ್ಠಬಂಧ ನಡೆದಿದ್ದು, ಬೆಳಿಗ್ಗೆಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಎರಡು ವರ್ಷಗಳಿಂದ ದೇವರ ದಿವ್ಯಮೂರ್ತಿಯ ದರ್ಶನಗೈಯ್ಯಲು ಹಾತೊರೆಯುತ್ತಿದ್ದ ಭಕ್ತರು ಬೆಳಿಗ್ಗೆ ದೇವರ ದರ್ಶನವಾಗುತ್ತಿದ್ದಂತೆ ಆಧ್ಯಾತ್ಮಕ-ಸಾತ್ವಿಕ ದಿವ್ಯಾನಂದ ಅಸನುಭವಿಸಿದರು. ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರನ್ನು ತನ್ನ ಕಣ್ತುಂಬಿಕೊಂಡರು.