ಬಂಟ್ವಾಳ:  ಭಾರತದ ಸಂಸ್ಕೃತಿ ಜಗತ್ತಿನಲ್ಲಿ ಸರಸಾಟಿ ಇಲ್ಲದ್ದು, ಇಲ್ಲಿನ ಜ್ಞಾನ, ಪರಂಪರೆ ಎಲ್ಲವೂ ವಿಶ್ವಮಾನ್ಯವಾಗಲು ಕಾರಣ ಎಂದು ಖ್ಯಾತ ವಿದ್ವಾಂಸ,ಶತಾವಧಾನಿ ಡಾ.ರಾ.ಗಣೇಶ್ ಹೇಳಿದರು.  ಕಲ್ಲಡ್ಲ ಶ್ರೀ ರಾಮ ವಿದ್ಯಾ ಕೇಂದ್ರ,ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ವಿದ್ಯಾಕೇಂದ್ರದ ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆದ ವಿವಿಧ ವಿಶ್ವವಿದ್ಯಾನಿಲಯಗಳ ರಾಜ್ಯಮಟ್ಟದ “ವಿಶ್ವವ್ಯಾಪಿ ಭಾರತ” ಎಂಬ ಒಂದುದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ‘ಭಾರತ ಸಂಸ್ಕೃತಿಯ ವೈಶ್ಚಿಕತೆ’ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು._DPK6992

ಉದಾರತೆ , ಭೌಗೋಳಿಕ ವ್ಯವಸ್ಥೆಯು ನಮ್ಮ ಜ್ಞಾನ ದಿಗಂತವನ್ನು ವಿಸ್ತರಿಸಿದೆ ಎಂದರೆ ಅತಿಶೋಯಕ್ತಿಯಲ್ಲ, ನಮ್ಮೆಲ್ಲರ ಶ್ರದ್ಧಾ ಕೇಂದ್ರ. ಭೂಮಧ್ಯೆ ರೇಖೆಯ ಭಾಗದಲ್ಲಿ ಇರುವಂತ ಸೂರ್ಯನ ನೇರ ಪ್ರಭಾವಕ್ಕೆ ಒಳಗಾಗಿರುವುದರಿಂದ ನಮ್ಮ ಚಿಂತನೆ, ಯೋಚನೆಗಳೆಲ್ಲವೂ ಉದಾತ್ತ ಮಟ್ಟಕ್ಕೆ ಏರಿದೆ ಎಂದರು .  ಸೂರ್ಯ ಜ್ಞಾನದ ಮೂಲ. ನಮ್ಮ ಸಂಸ್ಕೃತಿಯನ್ನು ಅರಳಿಸಿ, ವ್ಯಕ್ತಿತ್ವವನ್ನು ವಿಕಸನಗೊಳಿಸಿ ನಮ್ಮನ್ನು ಎತ್ತರಕ್ಕೆ ಏರಿಸುತ್ತದೆ ಎಂದ ಅವರು, ಬಹು ಸಂಸ್ಕೃತಿಯ ನಾಡಾದರೂ ಇಡೀ ದೇಶವೇ ಒಂದು ಎಂಬ ಭಾವ ನಮ್ಮನ್ನು ಆವರಿಸಿದೆ ಎಂದರು.

ಇಲ್ಲಿನ ಆಹಾರ, ಉಡುಗೆ-ತೊಡುಗೆ, ಪದ್ಧತಿಗಳು ಎಲ್ಲವೂ ವಿಭಿನ್ನವಾದರೂ, ನಮ್ಮದು ಒಂದೇ ಸಂಸ್ಕೃತಿಯನ್ನು ಹೊಂದಿದ ಮಹಾನ್ ರಾಷ್ಟ್ರ. ಯಾವ ಆಚರಣೆಗೂ ಇಲ್ಲಿ ವಿರೋಧವಿಲ್ಲ ಹಾಗಾಗಿ ಭಾರತದ, ಹಿಂದುಗಳು ಅಸಹಿಷ್ಣಗಳಾಗಲು ಸಾಧ್ಯವೇ ಇಲ್ಲ ಎಂದರು. ನಮ್ಮ ಜ್ಞಾನದ ಪರಂಪರೆ  ನಶಿಸಿ ಹೋಗಿದೆ ಎಂಬ ಭಾವನೆ ನಮ್ಮಲ್ಲಿದ್ದರೂ ಇಂದಿಗೂ ಅದು ಶೇ. 80 ಕ್ಕಿಂತಲೂ ಹೆಚ್ಚು ಉಳಿದುಕೊಂಡಿದೆ ಎಂಬುದು ಹೆಮ್ಮೆಯ ವಿಚಾರ. ಪಾಕಿಸ್ತಾನ, ಅಫಘಾನಿಸ್ತಾನಗಳಂತಹ ದೇಶದಲ್ಲಿದ್ದ ನಮ್ಮ ಪ್ರಾಚೀನ ವಿಶ್ವವಿದ್ಯಾನಿಲಯಗಳು ನಿರಂತರ ದಾಳಿಯಿಂದ ಜರ್ಜರಿತಗೊಂಡಿದೆಯಾದರೂ ಇಂದಿಗೂ ನಾವು ಜ್ಞಾನ, ಪರಂಪರೆಯ ವಾರಸುದಾರರು ಎಂಬ ಹೆಮ್ಮೆಯಿದೆ ಎಂದು ಹೇಳಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಕೃತಿಯ ವಿಶ್ವವ್ಯಾಪಕತೆಯ ಬಗೆ ನಮಗೆ ಅರಿವಿಲ್ಲದಿರುವುದು ದುರಂತ. ಉದ್ಧೇಶಪೂರ್ವಕವಾಗಿ ಪಠ್ಯಪುಸ್ತಕಗಳಿಂದ ಇದನ್ನು ಕೈಬಿಡಲಾಗಿದೆ. ಇಂತಹ ದುರುದ್ಧೇಶಪೂರಿತ ವ್ಯಕ್ತಿಗಳೇ ಶಿಕ್ಷಣ ಇಲಾಖೆಯನ್ನು ನಿರ್ವಹಿಸುತ್ತಿರುವುದು ಖೇದಕರ. ಆದರೆ ಯಾವುದೋ ಒಂದು ಹಂತದಲ್ಲಿ ನೈಜತೆ ಅರಿವಿಗೆ ಬರಬೇಕಾಗಿರುವುದರಿಂದ  ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.ಇದೇ ವೇಳೆ ವಿದ್ಯಾಕೇಂದ್ರದ  ಚಟುವಟಿಕೆಗಳನ್ನು ವೀಕ್ಷಿಸಿದ ಹಿರಿಯರು ಮುಕ್ತ ಕಂಠದಿಂದ ಶ್ಲಾಘಿಸಿದರು.  ವಿಚಾರ ಸಂಕಿರಣದ 2ನೇ ಅವಧಿಯಲ್ಲಿ ಮಹಾರಾಷ್ಟ್ರದ ಔರಂಗಬಾದ್ ವಿಶ್ವವಿದ್ಯಾನಿಲಯದ ಡಾ| ಶರದ್ ಹೆಬ್ಬಾಳ್ಕರ್ ಭಾರತೀಯ ‘ಸಂಸ್ಕೃತಿಯ ವಿಶ್ವಸಂಚಾರ’ ಎಂಬ ವಿಷಯ ಮಂಡಿಸಿದರು.

ವೇದಿಕೆಯಲ್ಲಿ ಪ್ರಜ್ಞಾಪ್ರವಾಹ ಸಂಯೋಜಕ  ರಘನಂದನ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು.ಈ ವಿಚಾರ ಸಂಕಿರಣದಲ್ಲಿ ಭಾರತೀಯ ಸಂಸ್ಕೃತಿಯ ವಿಶ್ವಸಂಚಾರದ ವಿವಿಧ ಆಯಾಮಗಳನ್ನು ಬಿಂಬಿಸುವ  ಪ್ರದರ್ಶನ, ಸ್ತಬ್ಧಚಿತ್ರಗಳು ನೋಡುಗರ ಗಮನ ಸೆಳೆದವು. ಮಂಗಳೂರು ವಿಶ್ವವಿದ್ಯಾನಿಲಯದ 35 ಕಾಲೇಜುಗಳಿಂದ 152 ವಿದ್ಯಾರ್ಥಿಗಳು, 46 ಉಪನ್ಯಾಸಕರು, ಅಲ್ಲದೇ ತುಮಕೂರು, ಬೆಂಗಳೂರು, ರಾಣಿಚೆನ್ನಮ್ಮ, ಮೈಸೂರು, ಶಿವಮೊಗ್ಗ, ಗುಲ್ಬರ್ಗ, ಕರ್ನಾಟಕ ವಿಶ್ವವಿದ್ಯಾನಿಲಯ ಸಹಿತ 13 ವಿಶ್ವವಿದ್ಯಾನಿಲಯಗಳ 53 ವಿದ್ಯಾರ್ಥಿಗಳು, 14 ಉಪನ್ಯಾಸಕರು ಅಲ್ಲದೇ 39 ಪ್ರತಿನಿಧಿಗಳು ಹಾಗೂ ಶ್ರೀರಾಮ ವಿದ್ಯಾಸಂಸ್ಥೆಯ 135 ಉಪನ್ಯಾಸಕರು, 360 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 847 ಮಂದಿ ಭಾಗವಹಿಸಿದ್ದರು.

ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್  ಕಟ್ಟೆ ಸ್ವಾಗತಿಸಿ, ವಿದ್ಯಾ ಕೇಂದ್ರದ ಸಂಚಾಲಕ ವಸಂತ ಮಾದವ ವಂದಿಸಿದರು. ಪದವಿ ವಿಭಾಗದ ಕನ್ನಡ ಉಪನ್ಯಾಸಕ ಯತಿರಾಜ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *