ಕೈಕಂಬ: ಲೋಕ ಕಲ್ಯಾಣಾರ್ಥವಾಗಿ ಮರವೂರಿನ ದುರ್ಗಾಪರಮೇಶ್ವರಿ ದೇಗುಲದಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ತನಕ ನಡೆಯುವ `ಅಮ್ಮನೆಡೆಗೆ ನಮ್ಮ ನಡೆ ಪಾದಯಾತ್ರೆ ಅಭಿಯಾನ’ಕ್ಕೆ ಭಾನುವಾರ ಕಲ್ಲಡ್ಕ ಪ್ರಭಾಕರ್ ಭಟ್ ದೀಪ ಬೆಳಗಿಸಿ ಅದ್ಧೂರಿ ಚಾಲನೆ ನೀಡಿದರು. ಈ ಕೈಂಕರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದು ಭಕ್ತಿಪರವಶರಾದರು. ಲೋಕಕಲ್ಯಾಣಾರ್ಥವಾಗಿ ನಡೆದ ಆರನೇ ವರ್ಷದ ಪಾದಯಾತ್ರೆ ಇದಾಗಿದೆ. ಈ ವೇಳೆ ಮಾತಾಡಿದ ಕಲ್ಲಡ್ಕ ಪ್ರಭಾಕರ ಭಟ್, ಲೋಕಕಲ್ಯಾಣಾರ್ಥವಾಗಿ ಮರವೂರು ಸಂದೀಪ್ ಶೆಟ್ಟಿಯವರು ಆರು ವರ್ಷಗಳಿಂದ ಪಾದಯಾತ್ರೆ ನಡೆಸುತ್ತಿದ್ದಾರೆ. ಇದನ್ನು ಮುಂದುವರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಪ್ರಶಂಸಿಸಿದರು.ammanade

ಪಾದಾಯಾತ್ರೆಯಲ್ಲಿ ಕಟೀಲು ದುರ್ಗಾಪರಮೇಶ್ವರಿಯ ಚಿತ್ರವನ್ನೊಳಗೊಂಡ ಪುಷ್ಪಾಲಂಕೃತ ದೇವರ ರಥ, ಬ್ರಹ್ಮ, ವಿಷ್ಣು, ಮಹೇಶ್ವರ ಯಕ್ಷಗಾನ ವೇಷಾಧಾರಿಗಳು, ಭಜನ ಮಂಡಳಿ, ಸಂಘ -ಸಂಸ್ಥೆಗಳು ಪಾಲ್ಗೊಂಡಿದ್ದವು. ದೇವಿಗೆ ಜಯಕಾರ ಹಾಕುವ ಮೂಲಕ ಭಜನ ಸಂಕೀರ್ತನೆಯೊಂದಿಗೆ ಭಕ್ತರು ದೇಗುಲದೆಡೆಗೆ ಹೆಜ್ಜೆ ಹಾಕಿದರು. ಸಂತ ಸ್ನಾನಿಕ ಯೋಹಾನ್ನ ದೇವಾಲಯ ಪೆರ್ಮುದೆಯ ಧರ್ಮಗುರುಗಳು ಮತ್ತು ಕ್ಯಥೋಲಿಕ ಕ್ರೈಸ್ತಬಾಂಧವರು ಪಾದಾಯಾತ್ರೆಗೆ ಶುಭಕೋರುವ ಬ್ಯಾನರ್ ಅಳವಡಿಸಿರುವುದು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ. ಈ ಬಾರಿ 30 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಲ್ಲಲ್ಲಿ ತಂಪುಪಾನೀಯ, ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಪಾದಾಯಾತ್ರೆ ಕಟೀಲಿಗೆ ತಲುಪಿತು. ಅಲ್ಲಿ ದೇವಸ್ಥಾನದ ವತಿಯಿಂದ ಅನ್ನಪ್ರಸಾದ ವಿತರಣೆ ನಡೆಯಿತು.ammanade 3

ಈ ಸಂದರ್ಭ ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ದಪೀಠ ಧರ್ಮದರ್ಶಿ ಪ್ರವೀಣ್ ರಾಜ್ ಮಚ್ಚೇಂದ್ರ ನಾಥ ಬಾಬಾ, ಶ್ರೀ ಕ್ಷೇತ್ರ ಕಟೀಲು ದೇವಾಲಯದ ಪ್ರಧಾನ ಅರ್ಚಕ ಕೆ.ವಾಸುದೇವ ಅಸ್ರಣ್ಣ, ಲಕ್ಷ್ಮೀ ನಾರಾಯಣ ಅಸ್ರಣ್ಣ, ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಉಮಾನಾಥ್ ಕೋಟ್ಯಾನ್, ಹರೀಶ್ ಪೂಂಜಾ, ಪಾದಯಾತ್ರೆ ಸಮಿತಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಹಿಂದೂ ಮುಖಂಡರಾದ ಶರಣ್ ಪಂಪ್ವೆಲ್, ಜಗದೀಶ್ ಶೇಣವ, ಮತ್ತಿತರರು ಉಪಸ್ಥಿತರಿದ್ದರು.ammanade 2

ಕಟೀಲು ದೇಗುಲದ ಬೀದಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಟೀಲು ದೇಗುಲದ ಆಡಳಿತ ಮೊಕ್ತೇಸರ ಡಾ| ಕೆ. ರವೀಂದ್ರನಾಥ ಪೂಂಜ, ಆರ್ಚಕ ಕೆ. ವಾಸುದೇವ ಆಸ್ರಣ್ಣ, ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಆನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಸಾಯಿನಾಥ ಶೆಟ್ಟಿ, ಅನಿಲ್‍ದಾಸ್ ಮೊದಲಾದವರು ಉಪಸ್ಥಿತರಿದ್ದರು. ಕಟೀಲಿನಲ್ಲಿ ಭಕ್ತರ ಸುವ್ಯವಸ್ಥೆಗೆ ಸ್ವಯಂ ಸೇವಕರು ಹಾಗೂ ಕಟೀಲು ಪದವಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *