ಕೈಕಂಬ: ಕೊರಗರ ಬದುಕುವ ಹಕ್ಕಿನ ಅನುಷ್ಠಾನಕ್ಕಾಗಿ ಒತ್ತಾಯಿಸಿ ಗಂಜಿಮಠ ಪಂಚಾಯತ್ ವ್ಯಾಪ್ತಿಯ ಮಳಲಿ ಸೈಟ್ ಸಮೀಪದ ದಲಿತರ ಕಾಲೊನಿ ನಿವಾಸಿಗಳು ಇಲ್ಲಿನ ನಿವಾಸಿ ಸದಾನಂದ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಮಿತಿ ವತಿಯಿಂದ ಗಂಜಿಮಠ ಗ್ರಾಮ ಪಂಚಾಯತ್‍ನ ಕಾರ್ಯಾಲಯದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಮಳಲಿ ಸೈಟ್ ನಿವಾಸಿ ಸದಾನಂದ ಎನ್ನುವವರ ಮನೆಯ ಕಂಪೌಂಡ್ ಬಳಿ ಹಳೆಯ ನೀರಿನ ಬೃಹತ್ ಗಾತ್ರದ ಟ್ಯಾಂಕ್ ಇದ್ದು, ಅದು ಅಪಾಯಕಾರಿಯಾದ ಪರಿಣಾಮ ಪಂಚಾಯತ್ ವತಿಯಿಂದ ಆರು ತಿಂಗಳ ಮುಂಚೆ ತೆಗೆಸಲಾಗಿತ್ತು. ಆದರೆ ಮುರಿದ ಟ್ಯಾಂಕ್‍ನ ಸೊತ್ತುಗಳನ್ನು ತೆರವುಗೊಳಿಸಿರಲಿಲ್ಲ. ಟ್ಯಾಂಕ್ ತೆಗೆದ ಸಂದರ್ಭ ಸದಾನಂದ ಅವರ ಮನೆಯ ಕಂಪೌಂಡ್ ಒಡೆದು ಹೋಗಿದ್ದು ಅದನ್ನೂ ಸರಿಪಡಿಸಿರಲಿಲ್ಲ. ಸದಾನಂದ ಅವರು ಸುಮಾರು 30ಕ್ಕಿಂತಲೂ ಅಧಿಕ ಮಲ್ಲಿಗೆ ಗಿಡದ ನೆಟ್ಟು ಅದರಿಂದ ಸುಮಾರು ನಾಲ್ಕರಿಂದ ಐದು ಸಾವಿರ ರೂ. ಆದಾಯ ಬರುತ್ತಿತ್ತುಎಂದರು. ಟ್ಯಾಂಕ್ ವಿಲೇವಾರಿಗೊಳಿಸುವ ಸಂದರ್ಭ ಅದು ನಾಶಗೊಂಡಿದ್ದು ಇದಕ್ಕೆ ಸೂಕ್ತ ಪರಿಹಾರ ಕೊಡುವಂತೆಯೂ ಪಂಚಾಯತ್‍ಗೆ ಮನವಿ ಸಲ್ಲಿಸಿ ಆರು ತಿಂಗಳು ಕಳೆದರೂ ಪಂಚಾಯತ್ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಕೊರಗರ ಜಿಲ್ಲಾ ಸಮಿತಿಯ ವತಿಯಿಂದ ಸದಾನಂದ ಅವರು ಪ್ರತಿಭಟನೆ ನಡೆಸಿದರು. ಅಲ್ಲದೆ ಇಂದೇ ನಷ್ಟ ಪರಿಹಾರ ಕೊಟ್ಟು, ಕಾಮಗಾರಿ ತಕ್ಷಣ ಆರಂಭಿಸಬೇಕು ಇಲ್ಲವಾದರೆ ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಪಂಚಾಯತ್ ಅಧ್ಯಕ್ಷೆ ಮಾಲತಿ ಅವರು ಕಾಮಗಾರಿ ಶೀಘ್ರ ಆರಂಭಿಸಿ, ನಷ್ಟ ನೀಡಲಾಗುವುದು ಎಂದು ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಒಂದು ವಾರದಲ್ಲಿ ನಷ್ಟ ಪರಿಹಾರ ನೀಡಿ, ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಬರಹದ ಮೂಲಕ ಭರವಸೆ ನೀಡಿದ ಕಾರಣ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಕೊನೆಗೆ ಇವತ್ತು ಕಾಮಗಾರಿಯನ್ನು ಆರಂಭಿಸಲಾಯಿತು.
ಎಲ್ಲರ ಸಭೆ ಕರೆದು ಕ್ರಿಯಾಯೋಜನೆಯಲ್ಲಿ ಸೇರಿಸಿ ಕಾಮಾಗಾರಿ ನಡೆಸಬೇಕಾಗಿದೆ. ಈ ಬಗ್ಗೆ ಕ್ರಿಯಾ ಯೋಜನಡಿಯಲ್ಲಿ ಕಾಮಗಾರಿ ನಡೆಸುವ ಭರವಸೆ ಬಗ್ಗೆ ಈ ಹಿಂದೆಯೇ ಭರವಸೆ ನೀಡಿದ್ದೆವು. ಆದರೆ ಪ್ರತಿಭಟನೆಕಾರರು ಇವತ್ತಿನಿಂದಲೇ ಕಾಮಗಾರಿ ನಡೆಸುವಂತೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಭೆ ಕರೆದು ಕ್ರಿಯಾಯೋಜನೆಯಲ್ಲಿ ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದು ಗಂಜಿಮಠ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಅವರು ಪತ್ರಿಕೆಗೆ ತಿಳಿಸಿದ್ದಾರೆ. ಉಪಾಧ್ಯಕ್ಷ ಝಾಕಿರ್, ಸದಸ್ಯ ಮಾಧವ ಕಾಜಿಲ ಇದ್ದರು.
