ವಾಮಂಜೂರು : ಮಂಗಳೂರು ನಗರ ಪಾಲಿಕೆ ಸ್ವಾಮ್ಯದ ಪಚ್ಚನಾಡಿ ಡಂಪಿಂಗ್ ಯಾರ್ಡಿನಲ್ಲಿ ಬುಧವಾರ ಮಧ್ಯಾಹ್ನ ಭಾರೀ ಬೆಂಕಿ ದುರಂತ ಸಂಭವಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಧ್ಯಾಹ್ನ ಸುಮಾರು 2 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಪಚ್ಚನಾಡಿ ಡಂಪಿಂಗ್(ತ್ಯಾಜ್ಯ ತಿಪ್ಪೆ) ಯಾರ್ಡಿನ ಎಡ ಭಾಗದಲ್ಲಿ ಬೆಂಕಿ ಹತ್ತಿಕೊಂಡಿದೆ. ಸ್ವಲ್ಪ ಹೊತ್ತಿನಲ್ಲೇ ಬೆಂಕಿ ಕೆನ್ನಾಲಿಗೆ ಆಕಾಶದೆತ್ತರ ಹಬ್ಬಿದ್ದು, ಎಲ್ಲೆಡೆ ದಟ್ಟ ಹೊಣೆ ತುಂಬಿಕೊಂಡಿದೆ.
ಅಪರಿಚಿತರು ಇಲ್ಲಿ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸ್ಥಳದಲ್ಲಿ ಅಗ್ನಿಶಾಮಕ ದಳದ ನಾಲ್ಕೈದು ನೀರಿನ ಯಂತ್ರಗಳ ಸಹಿತ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಜೆಯವರೆಗೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಖಾಸಗಿ ನೀರಿನ ಟ್ಯಾಂಕರುಗಳೂ ಬೆಂಕಿ ನಂದಿಸುವ ಕೆಲಸ ನಡೆಸುತ್ತಿವೆ.
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಂಕಿ ಹತ್ತಿಕೊಂಡಿರುವ ಬಗ್ಗೆ ಪತ್ರಿಕಾ ಪ್ರತಿನಿಧಿ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಗೆ ಫೋನಾಯಿಸಿ ವಿಚಾರಿಸಿದಾಗ, ತಮಗೆ ಪಚ್ಚನಾಡಿಯಲ್ಲಿ ಬೆಂಕಿ ಹತ್ತಿಕೊಂಡ ವಿಷಯವೇ ಗೊತ್ತಿಲ್ಲ ಎಂದು ಪೊಲೀಸರು ತಿಳಿಸಿದರು.
ಅಪಾರ ತ್ಯಾಜ್ಯಕ್ಕೆ ಬೆಂಕಿ ಹತ್ತಿಕೊಂಡಿರುವುದರಿಂದ, ಇದರೊಳಗಿರುವ ಅನಿಲದ ಪ್ರಭಾವದಿಂದ ನೀರು ಹಾಕಿದರೂ ತಕ್ಷಣಕ್ಕೆ ಬೆಂಕಿ ನಿಯಂತ್ರಣಕ್ಕೆ ಬರಲಾರದು ಎಂದು ಸ್ಥಳೀಯರೊಬ್ಬರು ಹೇಳಿದರು.

