ಕೈಕಂಬ: ಕುಪ್ಪೆಪದವು ಮದ್ರಸಾ ವಿವಾದ ಹೈಕೋರ್ಟ್‍ನಲ್ಲಿದ್ದು, ಆದರೆ ವಕ್ಫ್ ಬೋರ್ಡ್ ಮಸೀದಿಯ ಆಡಳಿತ ಮಂಡಳಿಗೆ ಯಾವುದೇ ನೋಟೀಸ್ ನೀಡದೆ ಏಕಾಏಕಿ ಮದರಸ ನಾಮಫಲಕವನ್ನು ಬದಲಾಯಿಸಲು ಆಗಮಿಸಿದ್ದಾರೆಂದು ಆರೋಪಿಸಿ ಜಿಲ್ಲಾ ವಕ್ಫ್ ಬೋರ್ಡ್ ಕಾರ್ಯದರ್ಶಿ ಅಬೂಬಕ್ಕರ್ ವಿರುದ್ಧ ಜಮಾಅತಿನವರು ಆಕ್ರೋಶ ವ್ಯಕ್ತಿಪಡಿಸಿದ ಘಟನೆ ಗುರುವಾರ ನಡೆಯಿತು. ಇದರಿಂದಾಗಿ ಅಬೂಬಕ್ಕರ್ ಅವರು ಬೋರ್ಡ್ ಅಳವಡಿಸದೆ ವಾಪಸ್ ತೆರಳಿದ್ದಾರೆ.
ಕಳೆದ 20 ವರ್ಷಗಳಿಂದ ಮದೀನತುಲ್-ಉಲೂಂ ಮದರಸ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಈ ಮದರಸದ ಹೆಸರು ಕಾನೂನು ಬಾಹಿರ ಎಂದು ವಿರೋಧಿಸಿ ಸಂಘರ್ಷವೂ ನಡೆದಿತ್ತು.
ಇದೀಗ ರಾಜ್ಯ ವಕ್ಫ್ ಬೋರ್ಡ್‍ನವರು ಜಿಲ್ಲಾ ವಕ್ಫ್ ಬೋರ್ಡ್ ಕಾರ್ಯದರ್ಶಿ ಅಬೂಬಕ್ಕರ್ ಅವರಿಗೆ ಆದೇಶವೊಂದನ್ನು ನೀಡಿ ಈ ಮದರಸದ ನಾಮಫಲಕವನ್ನು ಅಲ್-ಮದರಸತುಲ್- ಬದ್ರಿಯಾ ಎಂದು ಬದಲಾಯಿಸುವಂತೆ ಸೂಚಿಸಿದ್ದರು. ಹೊಸ ನಾಮಫಲಕದೊಂದಿಗೆ ಪೊಲೀಸ್ ರಕ್ಷಣೆಯಲ್ಲಿ ಮದರಸಕ್ಕೆ ಅಬೂಬಕ್ಕರ್ ಅವರು ಆಗಮಿಸಿದ ಮಾಹಿತಿ ತಿಳಿದ ಜಮಾಅತಿನ ನೂರಾರು ಜನರು ಜಮಾಯಿಸಿ, `ಹೊಸ ನಾಮಫಲಕವನ್ನು ಯಾವುದೇ ಕಾರಣಕ್ಕೂ ಅಳವಡಿಸಲು ಬಿಡುವುದಿಲ್ಲ. ನಾಮಫಲಕ ಬದಲಾಯಿಸುವ ಬಗ್ಗೆ ಮಸೀದಿಯ ಆಡಳಿತ ಮಂಡಳಿಗೆ ಯಾವುದೇ ನೋಟೀಸ್ ನೀಡದೆ ಕೆಲವರ ಒತ್ತಡಕ್ಕೆ ಮಣಿದು, ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಇರುವಾಗ ಕಾನೂನು ಬಾಹಿರವಾಗಿ ಫಲಕ ಅಳವಡಿಸಲು ಮುಂದಾಗಿದ್ದಾರೆ. ನಿಯಮದಂತೆ 7 ದಿನಗಳ ಕಾಲಾವಕಾಶ ನೀಡಿ, ನಮಗೂ ನೋಟೀಸ್ ನೀಡಿದರೆ ಅದಕ್ಕೆ ಸೂಕ್ತ ಉತ್ತರ ನೀಡುತ್ತೇವೆ ಆಡಳಿತ ಮಂಡಳಿಯವರು ಅಬೂಬಕ್ಕರ್ ಅವರಿಗೆ ತಿಳಿಸಿದರು.
ರಾಜ್ಯ ವಕ್ಫ್ ಬೋರ್ಡ್‍ನ ಆದೇಶ ಪ್ರತಿಯಲ್ಲಿ ಕುಪ್ಪೆಪದವು ಮಸೀದಿಯ ಆಡಳಿತಕ್ಕೆ ಕಳಿಸಿದ ಬಗ್ಗೆ ಪ್ರತಿಯಲ್ಲಿ ನಮೂದಿಸಲಾಗಿದೆ. ಆದರೆ ಕುಪ್ಪೆಪದವು ಮದರಸಕ್ಕೆ ಈ ಆದೇಶದ ಪ್ರತಿ ಬಂದಿರಲಿಲ್ಲ. ಆದರೆ ವಕ್ಫ್ ಬೋರ್ಡ್ ಕಾರ್ಯದರ್ಶಿ ಅಬೂಬಕ್ಕರ್ ಅವರು ಈ ಆದೇಶದ ಪ್ರತಿಯನ್ನು ತಾನೇ ಹಿಡಿದು ಬಂದಿರುವುದಕ್ಕೆ ಕಾರಣವೇನು ಎಂದು ಜಮಾಅತರು ಪ್ರಶ್ನಿಸಿದರು. ಈ ಎಲ್ಲ ಘಟನೆಯ ಬಳಿಕ ಅಬೂಬಕ್ಕರ್ ಅವರು ಬೋರ್ಡ್ ಅಳವಡಿಸಲಾಗದೆ ವಾಪಸ್ ತೆರಳಿದ್ದಾರೆ.
ಕೆಲವು ತಿಂಗಳ ಹಿಂದೆ ಮದರಸದ ಐಡಿ ಕಾರ್ಡ್ ವಿಚಾರದಲ್ಲಿ ವಿವಾದ ಉಂಟಾಗಿ, ಘರ್ಷಣೆ ಸಂಭವಿಸಿ, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಮಾಅತಿನ ಪ್ರಮುಖರಾದ ಎಲ್. ಉಮರಬ್ಬ, ರಫೀಕ್ ಅಚಾರಿಜೋರ, ಡಿ.ಪಿ. ಹಮ್ಮಬ್ಬ, ಷರೀಫ್ ಕಜೆ, ಇಸ್ಮಾಯಿಲ್, ನವಾಝ್ ಸೇರಿ ಹಲವಾರು ಮಂದಿ ಇದ್ದರು. ಬಜಪೆ ಇನ್ಸ್‍ಪೆಕ್ಟರ್ ಪರಶಿವಮೂರ್ತಿ, ಪಣಂಬೂರು ಠಾಣಾ ಪೊಲೀಸ್ ಅಧಿಕಾರಿ ರಫೀಕ್ ಮುಂತಾದವರ ನೃತೃತ್ವದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಬಂದೋಬಸ್ತ್ ಕೈಗೊಂಡಿದ್ದರು.
