ಕೈಕಂಬ: ಬರೋಡಾ ಬ್ಯಾಂಕಿನೊಂದಿಗೆ ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಖಂಡಿಸಿದ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಗುರುವಾರ ಬೆಳಿಗ್ಗೆ ಗುರುಪುರ ಕೈಕಂಬ ಜಂಕ್ಷನಿನಲ್ಲಿರುವ ವಿಜಯ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಿತು.ನಷ್ಟದಲ್ಲಿರುವ ಬರೋಡಾ ಬ್ಯಾಂಕಿನೊಂದಿಗೆ ಅವಿಭಜಿತ ದಕ್ಷಿಣ ಕನ್ನಡದ ಒಂದು ಪ್ರತಿಷ್ಠಿತ ಹಾಗೂ ಲಾಭದಾಯಕ ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಕೇಂದ್ರದ ಜನ ವಿರೋಧಿ ನೀತಿಗೆ ಸ್ಪಷ್ಟ ಸಾಕ್ಷ್ಯಿಯಾಗಿದ್ದು, ಇದು ದೇಶದಲ್ಲೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ ಜಿಲ್ಲೆಗೆ ಕಪ್ಪು ಚುಕ್ಕಿಯಾಗಿದೆ. ನಮ್ಮ ಬ್ಯಾಂಕ್ ಉಳಿಸುವುದು ನಮ್ಮ ಹಕ್ಕು ಮತ್ತು ಇದು ನಮ್ಮ ಸ್ವಾಭಿಮಾನದ ಪ್ರಶ್ನೆಯಾಗಿದೆ ಎಂದು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಹೇಳಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಸದಸ್ಯ ಪೃಥ್ವೀರಾಜ್ ಆರ್ ಕೆ, ಎ ಬಿ ಶೆಟ್ಟಿಯವರಿಂದ ಸ್ಥಾಪಿತ ಮೂಲ್ಕಿ ಸುಂದರರಾಮ ಶೆಟ್ಟಿಯವರಿಂದ ಆರ್ಥಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿರುವ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ಬರೋಡಾ ಬ್ಯಾಂಕಿನೊಂದಿಗೆ ವಿಲೀನ ಮಾಡಿ ಬ್ಯಾಂಕಿನ ಹೆಸರು ಅಳಿಸಿ ಹಾಕಲು ಹೊರಟಿರುವ ಮೋದಿ ಸರ್ಕಾರದ ಷಡ್ಯಂತ್ರಕ್ಕೆ ಹಾಗೂ ಬ್ಯಾಂಕ್ ವಿಲೀನ ಪ್ರಕ್ರಿಯೆಗಾಗಿ ನಡೆದಿರುವ ಸುದೀರ್ಘ ಚರ್ಚೆ ವೇಳೆ ಗಾಢ ನಿದ್ದೆಯಲ್ಲಿದ್ದ ಮಂಗಳೂರು ಸಂಸದ ನಳಿನ್ ಕುಮಾರ ಕಟೀಲಿಗೆ ಧಿಕ್ಕಾರ ಎಂದರು.
ನಷ್ಟದಲ್ಲಿರುವ ಬ್ಯಾಂಕಿನೊಂದಿಗೆ ಲಾಭದಲ್ಲಿರುವ ಬ್ಯಾಂಕ್ ವಿಲೀನಗೊಳಿ, ಒಂದು ಬ್ಯಾಂಕಿನ ಹೆಸರು ಅಳಿಸಿ ಹಾಕುವುದು ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ ನಾಚಿಕೆಗೇಡಿನ ಸಂಗತಿ. ಇದಕ್ಕೆ ಕಾಂಗ್ರೆಸ್ಸಿನಿಂದ ಬಲವಾದ ವಿರೋಧವಿದೆ ಎಂದು ಜಿಪಂ ಸದಸ್ಯ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಹೇಳಿದರು.
ಈ ಸಂದರ್ಭದಲ್ಲಿ ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಜಿ ಸುವರ್ಣ, ಪಡುಪೆರಾರ ಗ್ರಾಪಂ ಉಪಾಧ್ಯಕ್ಷ ನೂರ್ ಮೊಹಮ್ಮದ್ ಮಾತನಾಡಿದರು. ಪ್ರತಿಭಟನೆಯಲ್ಲಿ ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಜಾಕಿರ್, ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಕಂದಾವರ ಗ್ರಾಪಂ ಉಪಾಧ್ಯಕ್ಷ ದೇವೇಂದ್ರ, ಹರೀಶ್ ಬಂಗ್ಲೆಗುಡ್ಡೆ, ತಾಪಂ ಸದಸ್ಯ ಸಚಿನ್ ಅಡಪ, ಸುನಿಲ್ ಪೂಜಾರಿ ಗಂಜಿಮಠ, ಕೃಷ್ಣ ಅಮೀನ್, ಟಿ. ಅಹಮ್ಮದ್ ಬಾವ ಅಡ್ಡೂರು, ಜೆರಾಲ್ಡ್ ಸಿಕ್ವೇರ, ಬೂಬ ಪೂಜಾರಿ, ಬಾಷಾ ಮಾಸ್ಟರ್, ಬಾಷಾ ಗುರುಪುರ ಮೊದಲಾದವರಿದ್ದರು.
