ಮೂಡುಬಿದಿರೆ: ಡಾ. ರಾಜ್ಕುಮಾರ್, ಚಾರ್ಲಿಚಾಪ್ಲಿನ್ನಂತಹ ಮಹಾನ್ ಕಲಾವಿದರು ಕೂಡಾ ರಂಗಭೂಮಿಯ ಹಿನ್ನೆಲೆಯಿಂದ ಬೆಳೆದು ಬಂದವರು. ರಂಗಭೂಮಿ ಕಲಾವಿದರ ಕಲಾಜೀವನದ ಜೀವಾಳ ಎಂದು ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಹೇಳಿದರು.
ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಸಿದ್ಧಕಟ್ಟೆ ಸದ್ಗುರು ಕಲಾ ತಂಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದ್ಗುರು ಕಲಾ ತಂಡವನ್ನು ಉದ್ಯಮಿ ಶ್ರೀಪತಿ ಭಟ್ ಉದ್ಘಾಟಿಸಿ, ಕಲಾ ತಂಡಗಳು ರಂಗಭೂಮಿಯ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಸದ್ಗುರು ಕಲಾ ತಂಡ ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಮಜಾಭಾರತ ಕಲಾವಿದೆ ಆರಾಧನ ಭಟ್, ರಾಷ್ಟ್ರ ಮಟ್ಟದ ಕ್ರೀಡಾಪಟು ರಮ್ಯಶ್ರೀ ಜೈನ್ ಸಿದ್ಧಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಜೈಸನ್ ತಾಕೊಡೆ, ಸಿದ್ಧಕಟ್ಟೆ ಯುವ ಫ್ರೆಂಡ್ಸ್ ಕ್ಲಬ್ನ ಸಂಸ್ಥಾಪಕ ಹೇಮಚಂದ್ರ ಗೌಡ, ಪ್ರಗತಿಪರ ಕೃಷಿಕ ಪ್ರಕಾಶ್ ಜೈನ್ ಜಂಕಳ, ಉದ್ಯಮಿ ನವೀನ್ ಪೂಜಾರಿ ಇತರರು ಉಪಸ್ಥಿತರಿದ್ದರು.
ಶಶೀಂದ್ರ ಕೆ. ಜಂಕಳ ರಚಿಸಿದ ಗೌಜಿಂಡು ತುಳು ಹಾಸ್ಯಮಯ ಸಾಂಸಾರಿಕ ನಾಟಕವನ್ನು ದಯಾನಂದ ಸಿದ್ಧಕಟ್ಟೆ ನಿರ್ದೇಶನದಲ್ಲಿ, ಸದ್ಗುರು ಕಲಾತಂಡದ ಸದಸ್ಯರು ಪ್ರದರ್ಶಿಸಿದರು.
ಕಾರ್ಯಕ್ರಮವನ್ನು ಪ್ರದೀಪ್ ಎಡಪದವು ಸ್ವಾಗತಿಸಿದರು. ಸಂತೋಷ್ ಸಿದ್ಧಕಟ್ಟೆ ನಿರೂಪಿಸಿದರು. ಹರ್ಷಿತ್ ಪಡ್ರೆ ಅಭಿನಂದಿಸಿದರು.
