ಮೂಡುಬಿದಿರೆ: ಕುಡುಬಿ ಜನಾಂಗದವರ ಪ್ರಕೃತಿ ಆರಾಧನೆಯ ಪ್ರಮುಖ ಆಚರಣೆಯಾದ ವನಭೋಜನವನ್ನು ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರ್ಕೇರೆ ಪೂಮವರ ವಾಡೆಯಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.

ನೀರ್ಕೆರೆ ಪೂಮಾರ್ ವಾಡೆಯ ಗುರಿಕಾರ ಸಂಜೀವ ಗೌಡ ಅವರ ನೇತೃತ್ವದಲ್ಲಿ ವನದುರ್ಗೆಯ ಪೂಜೆ, ಧವಸಧಾನ್ಯ, ಹಣ್ಣು ಹಂಪಲು ದೇವಿಗೆ ನೈವೇದ್ಯ, ವಿಶೇಷ ಪ್ರಾರ್ಥನೆ ನಡೆದು ಸಹಭೋಜನ ಮಾಡಲಾಯಿತು.
ಸ್ವತಃ ಕುಡುಬಿ ಸಮುದಾಯವರೇ ರಚಿಸಿದ ಮಹಮ್ಮಾಯಿ, ಮಹಾದೇವನ ಮಣ್ಣಿನ ಮೂರ್ತಿಯನ್ನು ಹೊಳೆ ಬದಿಯಲ್ಲಿ ಪ್ರತಿಷ್ಠಾಪಿಸಲಾಯಿತು. ತಾವು ಬೆಳೆಸಿದ ಬೆಳೆ, ತಯಾರಿಸಿದ ಆಹಾರವನ್ನು ವಾಡೆ ಗುರಿಕಾರರ ನೇತೃತ್ವದಲ್ಲಿ ದೇವಿಗೆ ನೈವೇದ್ಯವಾಗಿ ಅರ್ಪಿಸಿದರು. ಸಾಯಂಕಾಲ ಸೂರ್ಯಾಸ್ತದ ಬಳಿಕ ಮೂರ್ತಿಗೆ ಪೂಜೆ ಸಲ್ಲಿಸಿ ಹೊಳೆಯಲ್ಲಿ ವಿಸರ್ಜಿಸಲಾಯಿತು.
ನೀರ್ಕೆರೆ ಪೂಮಾವರ ವಾಡೆಯ ಕಾರ್ಯದರ್ಶಿ ಲಿಖಿತ್ ರಾಜ್ (ಲಿಂಗಪ್ಪ ಗೌಡ) ಸಹಿತ ಸಮುದಾಯ ಹಿರಿಯರು, ವಾಡೆಯ ಕುಟುಂಬದವರು ಭಾಗವಹಿಸಿದರು.
