ಮಂಗಳೂರು: ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಮೌಲ್ಯಮಾಪನ ನಡೆಸಿದ ಮೌಲ್ಯಮಾಪಕರು ನಿರ್ಲಕ್ಷ ಹಾಗೂ ಬೇಜಾವಬ್ಧಾರಿಯಿಂದ ವರ್ತಿಸಿರುವ ಕಾರಣ ನೂರಾರು ಕಾನೂನು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ವಿವೇಕಾನಂದ ಕಾನೂನು ಕಾಲೇಜು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆದ್ದರಿಂದ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ನೆರವಿನೊಂದಿಗೆ ಮರು ಮೌಲ್ಯಮಾಪನಕ್ಕೆ ಆಗ್ರಹಿಸಿ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಲು ಮುಂದಾಗಿದ್ದೇವೆ ಎಂದು ವಿವೇಕಾನಂದ ಕಾಲೇಜ್ ನ ತಾಹೀರ್ ಹುಸೇನ್ ಅವರು ಇಂದು ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ಸರಿಯಾಗಿ ನಡೆಸಲಾಗಿಲ್ಲ ಎಂಬ ಬಗ್ಗೆ ನೂರಾರು ಸಹಿಗಳನ್ನು ಒಳಗೊಂಡ ದೂರು ತಮಗೆ ಬಂದಿದ್ದು, ಈ ಬಗ್ಗೆ ಕಾನೂನು ಹೋರಾಟಕ್ಕೆ ತಾವು ಸಿದ್ಧತೆ ನಡೆಸಿದ್ದೇವೆ. ದೂರು ನೀಡಿರುವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ನಡೆಸಿ ಅವರಿಗೆ ನ್ಯಾಯ ದೊರಕಿಸಬೇಕು. ವಿದ್ಯಾರ್ಥಿಗಳು ಬರೆದ ಸರಿಯಾದ ಉತ್ತರಕ್ಕೆ ಸೂಕ್ತ ಅಂಕಗಳನು ನೀಡಬೇಕು, ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದೇ ಇದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂದನ್ ರೈ, ನೊಂದ ವಿದ್ಯಾರ್ಥಿಗಳಾದ ಅಬ್ದುಲ್ ಅನ್ಸಾರ್, ಪ್ರಮೀಳಾ ಪಿ. ಉಪಸ್ಥಿತರಿದ್ದರು.

