ಮೂಡುಬಿದಿರೆ: ಮತದಾರರು ಮುಂಬರುವ ಲೋಕಸಭೆಯ ಚುನಾವಣಾ ಫಲಿತಾಂಶವನ್ನು ಪಂಚರಾಜ್ಯದ ಚುನಾವಣಾ ಫಲಿತಾಂಶದಲ್ಲಿ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಸಾಮಥ್ರ್ಯವನ್ನು ಈ ಚುನಾವಣೆಯ ಮೂಲಕ ತೋರ್ಪಡಿಸಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‍ನ ಯುವನಾಯಕ ರಾಹುಲ್ ಗಾಂಧಿ ತಾಳ್ಮೆಗೆಡದೆ ದೇಶದಾದ್ಯಂತ ಸಂಚರಿಸಿ, ಪ್ರಚಾರ ಮಾಡಿದರ ಪರಿಣಾಮ ಈ ಗೆಲುವು ಕಾಂಗ್ರೆಸ್ ಪಕ್ಷದ ಪಾಲಾಗಿದೆ ಕಾಂಗ್ರೆಸ್ ಮುಕ್ತ ಭಾರತ ಎಂದು ಧ್ವನಿಯೆತ್ತುವವರಿಗೆ ಕಾಂಗ್ರೆಸ್ ಮುಕ್ತ ಸರ್ಕಾರ ರಚಿಸುವುದು ಅವರ ಆಯುಷ್ಯದಲ್ಲಿ ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷವು ಜನಸಾಮಾನ್ಯರ ಏಳಿಗೆಗೆ, ಬದುಕಿಗೆ ಅವಿರತವಾಗಿ ಶ್ರಮಿಸಿದ್ದು ಗಾಂಧೀಜಿಯವರ ತತ್ವಾದರ್ಶಗಳು ಕಾಂಗ್ರೆಸ್ ಪಕ್ಷಕ್ಕೆ ಆದರ್ಶವಾಗಿದೆ. ಭಾರತ ನಿರ್ಜೀವವಾದ ಸಂದರ್ಭ ಭಾರತಕ್ಕೆ ಚೇತನವನ್ನು ತುಂಬಿದವರು ಗಾಂಧೀಜಿ ಎಂದು ಹೇಳಿದರು.
ಬಿ.ಜೆ.ಪಿಯ ಮಾಡಿದ ನೋಟು ಅಪಮೌಲ್ಯೀರಣ ಕ್ರಮದಿಂದಾಗಿ ಜನಸಾಮಾನ್ಯರ ಬದುಕು ಕಷ್ಟದಲ್ಲಿ ಸಿಲುಕಿದ್ದು ಕಾಳಧನದ ನೆಪದಲ್ಲಿ ಬಡವರ ಬಾಳಿಗೆ ತೊಂದರೆಯಾಗಿದೆ. ಸರ್ವಾಧಿಕಾರ ಮನೋಭಾವವೇ ಬಿ.ಜೆ.ಪಿಯ ಸೋಲಿಗೆ ಕಾರಣವಾಗಿದ್ದು ಕಾಂಗ್ರೆಸಿಗರೂ ಎಲ್ಲಿಯೂ ಬಿ.ಜೆ.ಪಿ ಮುಕ್ತ ಭಾರತ ಎಂಬುದನ್ನು ತಿಳಿಸಿಲ್ಲ. ಯಾಕೆಂದರೆ ಪ್ರಜಾಪ್ರಭುತ್ವದ ಯಶಸ್ಸಿಗೆ ವಿರೋಧ ಪಕ್ಷ ಅಗತ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸತತ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಎಂದೂ ಮಂತ್ರಿಗಿರಿಗೆ ಆಸೆಪಡದೆ ನಿಸ್ವಾರ್ಥವಾಗಿ, ಪಕ್ಷನಿಷ್ಠೆಯನ್ನು ಮೆರೆದ ಪ್ರತಾಪ್ ಚಂದ್ರ ಶೆಟ್ಟಿ ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಆಯ್ಕೆ ಎಂದು ಅಭಿನಂದಿಸಿದರು.
ಮುಂದಿನ ಚುನಾವಣೆಗೆ ನಾನು ಸ್ಪರ್ಧಿಯಲ್ಲ, ಇನ್ನು ರಾಜಕೀಯದಲ್ಲಿ ಯುವ ಜನರಿಗೆ ಅವಕಾಶ ನೀಡಬೇಕು ಎನ್ನುವ ನಿಟ್ಟಿನಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದರು. ಚುನಾವಣೆಗಳಲ್ಲಿ ಬೇರೆ ಬೇರೆ ಬದಲಾವಣೆಗಳಾಗಿದ್ದೂ ಕಾಂಗ್ರೆಸ್ ನ ಜನಪರ ಚಿಂತನೆಗಳು ಹಾಗೆಯೇ ಮುಂದುವರಿಯಲಿವೆ ಎಂದು ಹೇಳಿದರು.
