ಮೂಡುಬಿದಿರೆ : ಸಮಾಜದಲ್ಲಿ ಪ್ರತಿಯೊಬ್ಬರಿಗೂ ವಿಕಲಚೇತನರ ಬಗ್ಗೆ ಜಾಗೃತಿ ಇರಬೇಕು. ನಾವು ನಮಗೆ ಸಿಗುವ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು. ನಮ್ಮಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ನಮಗಾಗಿ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾವು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕಾದರೆ ನಮಗೆ ಅನುಕಂಪ ಬೇಡ ಅವಕಾಶಗಳನ್ನು ನೀಡಿ ಎಂದು ನಿತ್ಯಾನಂದ ಹೇಳಿದರು.
ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಮೂಡುಬಿದಿರೆ ಇವುಗಳ ಆಶ್ರಯದಲ್ಲಿ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳ ಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮದಡಿ ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಮತ್ತು ವಿಶೇಷ ಸಾಮಥ್ರ್ಯವುಳ್ಳ ಮಕ್ಕಳು ಹಾಗೂ ಪೋಷಕರ ಸಮಾವೇಶವನ್ನು ಸಮಾಜಮಂದಿರದಲ್ಲಿ ಶುಕ್ರವಾರ ದೀಕ್ಷಿತ್ ಜತೆಯಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರನ್ನು ಪ್ರತ್ಯೇಕ ದೃಷ್ಟಿಯಿಂದ ನೋಡುವ ಮನೋಭಾವವನ್ನು ತೆಗೆದು, ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪ್ರಸ್ತುತ ಪಡಿಸಲು ಅವಕಾಶ ಕೊಡಬೇಕು. ನಮಗೆ ಸಮಾಜದಿಂದ ನಿರಂತರ ಪ್ರೋತ್ಸಾಹ ಸಿಗಬೇಕು. ವಿಕಲಚೇತರಿಗೆ ಅನುಕೂಲವಾಗುವಂತೆ ತಂತ್ರಜ್ಞಾನ ಕೂಡ ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜ ಮತ್ತು ಹೆತ್ತವರಿಂದ ಈ ರೀತಿಯ ಪ್ರೋತ್ಸಾಹ ಸಿಕ್ಕಲ್ಲಿ ‘ಜೀವನದಲ್ಲಿ ಅಸಾಧ್ಯ ಎಂಬುದು ಯಾವುದೂ ಇಲ್ಲ’ ಎಂಬುದನ್ನು ನಾವು ಕೂಡ ಸಾಧಿಸಿ ತೋರಿಸಬಲ್ಲೆವು ಎಂದರು.

ಜಿಲ್ಲಾ ವಿಕಲಚೇತನರ ಪುನರ್ವಸತಿ ಅಧಿಕಾರಿ ಪಿ.ವಿ ಸುಬ್ರಮಣಿ ಮಾತನಾಡಿ, ದ.ಕ ಜಿಲ್ಲಾ ವಿಕಲಚೇತನರ ಪುನರ್ವಸತಿ ಅಧಿಕಾರಿ ಪಿ.ವಿ.ಸುಬ್ರಮಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜಿಲ್ಲೆಯಲ್ಲಿ 2011ರಲ್ಲಿ ನಡೆದ ಜನಗಣತಿಯಲ್ಲಿ 28,098 ಜನ ವಿಕಲಚೇತನರನ್ನು ಗುರುತಿಸಲಾಗಿತ್ತು ಇದೀಗ ಆ ಜನಸಂಖ್ಯೆಯು 30,000ಕ್ಕೆ ಏರಿದೆ. ಇವರ ಶ್ರೇಯೋಭಿವೃದ್ಧಿಗೆ ಸರಕಾರ ಸುಮಾರು 30ಕ್ಕೂ ಅಧಿಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅದರ ಸೌಲಭ್ಯವನ್ನು ಪಡೆದುಕೊಳ್ಳಿ’ ಎಂದು ಸಲಹೆ ಇತ್ತ ಅವರು ಈ ನಿಟ್ಟಿನಲ್ಲಿ ಇಲಾಖಾ ವ್ಯಾಪ್ತಿಯಲ್ಲಿ ನನ್ನಿಂದಾಗುವ ಸಹಕಾರವನ್ನು ಯಾವತ್ತೂ ನೀಡಲು ಸಿದ್ಧ ಎಂದು ಭರವಸೆ ನೀಡಿದರು.
ಉದ್ಯಮಿ ಹಸ್ದುಲ್ಲಾ ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಅರಿವು ವಿಶೇಷ ಮಕ್ಕಳ ತರಬೇತಿ ಕೇಂದ್ರ ಶಕ್ತಿನಗರ ಇದರ ಮುಖ್ಯಸ್ಥರಾದ ಪೂರ್ಣಿಮಾ ಆರ್.ಕೆ ಭಟ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಮುಖ್ಯೋಪಧ್ಯಾಯರ ಸಂಘದ ಅಧ್ಯಕ್ಷ ನಾಗೇಶ್ ಕುಮಾರ್, ಶಿಕ್ಷಕರಾದ ರೋಬರ್ಟ್ ಡಿಸೋಜಾ, ಸುಶೀಲಾ ಹೆಗ್ಡೆ, ವಿದ್ಯಾರ್ಥಿ ಧೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.
ಆದರ್ಶದ ನಿರ್ದೇಶಕ ಜೇಕಬ್ ವರ್ಗೀಸ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಆಶಾಲತ ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಧ್ಯಾ ನಿರೂಪಿಸಿದರು. ಸಂಜೀವಿ ವಂದಿಸಿದರು.
ಕಾರ್ಯಕ್ರಮಕ್ಕೆ ಮೊದಲು ಮೂಡುಬಿದಿರೆ ಥರ್ಡ್ ಶಾಲೆಯ ಬಳಿಯಿಂದ ಸಮಾಜ ಮಂದಿರದವರೆಗೆ ಜಾಗೃತಿ ಜಾಥಾ ನಡೆಯಿತು.

