ಪುತ್ತೂರು: ಸೋಮವಾರ ರಾತ್ರಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಾರ್ವಜನಿಕರಿಂದ ಹಲ್ಲೆಗೀಡಾಗಿ ಪೊಲೀಸರ ವಶವಾಗಿ ಕೆಲವೇ ಕ್ಷಣದಲ್ಲಿ ಠಾಣೆಯಿಂದ ಪರಾರಿಯಾದ ಕುಖ್ಯಾತ ಕ್ರಿಮಿನಲ್ ಮೊಹಮ್ಮದ್ ಅಶ್ರಫ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಇನ್ನೂ ಪೊಲೀಸ್ ವಶವಾಗಿಲ್ಲ.
ಆರೋಪಿಯ ಪತ್ತೆಗಾಗಿ ಮೂರು ತಂಡಗಳಲ್ಲಿ ಪೊಲೀಸರು ಅರಸೀಕೆರೆ, ಕಾಸರಗೋಡು ಮತ್ತು ರಾಮನಗರಗಳಿಗೆ ತೆರಳಿದ್ದರೂ ಆರೋಪಿ ಸಿಗಲಿಲ್ಲ.

ಮಂಗಳವಾರ ಸಂಜೆ ಪುತ್ತೂರು ನಟರಾಜ ಸಭಾಗಂಣದಲ್ಲಿ ಸಭೆ ಸೇರಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಗುರುವಾರ ಸಂಜೆಯೊಳಗೆ ಆರೋಪಿಯನ್ನು ಬಂಧಿಸದೇ ಇದ್ದರೆ ಶುಕ್ರವಾರ ಪುತ್ತೂರು ಬಂದ್ ಮಾಡಿ ಹೋರಾಟಕ್ಕೆ ಇಳಿಯುವುದಾಗಿ ಪ್ರಕಟಿಸಿದ್ದಾರೆ.
ವಿಹಿಂಪ ಮತ್ತು ಬಜರಂಗ ದಳ ಆಯೋಜಿಸಿದ್ದ ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಪೊಲೀಸರು ಉದ್ದೇಶಪೂರ್ವಕ ಆರೋಪಿಯನ್ನು ಠಾಣೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ಸಂಘ ಪರಿವಾರದ ಮುಖಂಡ ಡಾ. ಪ್ರಸಾದ್ ಭಂಡಾರಿ ಮತ್ತು ಅರುಣ್ ಕುಮಾರ್ ಪುತ್ತಿಲ, ಯಾವುದೇ ಕಾರಣಕ್ಕೂ ಆರೋಪಿಯ ಮೇಲೆ ಪೊಲೀಸರು ಉದಾರತೆ ತೋರುವುದನ್ನು ಸಹಿಸಲಾರೆವು, ಆರೋಪಿಯನ್ನು ಕೂಡಲೇ ಬಂಧಿಸಬೇಕು, ಇದಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರ ಜತೆ ಸಹಕಾರ ನೀಡಲು ಸಿದ್ಧರಿದ್ದಾರೆ. ಪೊಲೀಸರು ಕೊನೆಗೂ ತಮ್ಮ ಕೆಲಸ ಮಾಡದೇ ಇದ್ದರೆ ಕಾರ್ಯಕರ್ತರೇ ಪೊಲೀಸ್ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
