ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ಸಭಾಗೃಹದಲ್ಲಿ ಗುರುವಾರ ಮಹಿಳಾ ಗ್ರಾಮ ಸಭೆ ಮತ್ತು ಮಕ್ಕಳ ಗ್ರಾಮ ಸಭೆ ಏಕಕಾಲದಲ್ಲಿ ಜರುಗಿತು.ಶಾಲೆಗಳಿಗೆ ಆಟ ಮೈದಾನ, ಆವರಣ ಗೋಡೆ, ಬ್ಯಾಂಡ್, ರಸ್ತೆ, ಪ್ರಾಜೆಕ್ಟರ್ ನೀಡುವಂತೆ ವಿವಿಧ ಶಾಲೆಗಳ ಮಕ್ಕಳು ಬೇಡಿಕೆ ಇಟ್ಟರು. ಮಕ್ಕಳ ಪ್ರಶ್ನೆಗುತ್ತರಿಸಿದ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಶಾಲೆಗಳ ಮೈದಾನ ದುರಸ್ತಿ, ಅಗಲೀಕರಣ, ಸಮತಟ್ಟು ಕಾರ್ಯ ನಡೆಸಲಾಗುವುದು. ಗುರುಪುರ ಸರ್ಕಾರಿ ಪ್ರೌಢಶಾಲೆಗೆ ಪ್ರಾಜೆಕ್ಟರ್ ಹಾಗೂ ಅಡ್ಡೂರು ದಕ ಜಿಪಂ ಶಾಲೆಗೆ ಬ್ಯಾಂಡ್ ಸೆಟ್ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಮಕ್ಕಳ ಗ್ರಾಮಸಭೆಯಲ್ಲಿ ಗುರುಪುರ ಸರ್ಕಾರಿ ಪ್ರೌಢ ಶಾಲೆ, ಸಹಾರ ಶಾಲೆ, ನುಡುಗುಡ್ಡೆ ದಕ ಜಿಪಂ ಶಾಲೆ, ಅಡ್ಡೂರು ದಕ ಜಿಪಂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.ನಂತರ ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ ಜಿಲ್ಲಾ ಪಂಚಾಯತ್ ಸದಸ್ಯ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡುತ್ತ, ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ಇಲಾಖೆ ಸಬ್ಸಿಡಿಯುಳ್ಳ ಮೂರು ಲಕ್ಷ ರೂ ನೀಡುತ್ತದೆ. ಬೀದಿಬದಿ ವ್ಯಾಪಾರ ಮಾಡುವ ಮಹಿಳೆಯರಿಗೆ 10 ಸಾವಿರ ಧನ ಸಹಾಯ ಸಿಗುತ್ತದೆ. ಮಹಿಳೆಯರು ಇವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಮೊದಲ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ನಾಯಕರು ವೇದಿಕೆ ಹಂಚಿಕೊಂಡಿದ್ದರು. ಮಹಿಳಾ ಗ್ರಾಮ ಸಭೆಯಲ್ಲಿ ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಸದಸ್ಯೆ ಜಯಲಕ್ಷ್ಮೀ, ಸೇಸಮ್ಮ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಎರಡೂ ಕಾರ್ಯಕ್ರಮದಲ್ಲಿ ಗುರುಪುರ ಗ್ರಾಪಂ ಪಿಡಿಒ ಅಬೂಬಕ್ಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

