ಮೂಡುಬಿದಿರೆ: ಇಂದಿನ ಕೃಷಿಯಲ್ಲಿ ವಿಷ ರಾಸಾಯನಿಕದ ಅಧಿಕ ಬಳಕೆಯಿಂದಾಗಿ ಆ ವಿಷವು ನಮ್ಮ ದೇಹವನ್ನು ಸೇರುತ್ತಿದ್ದು, ಹೊಸ ಖಾಯಿಲೆಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂಬುದಾಗಿ ಲೇಖಕರು, ಸಂಘಟಕರು ಹಾಗೂ ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣರಾವ್ ಹೇಳಿದರು.
ಕಾಂತಾವರ ಅಲ್ಲಮಪ್ರಭು ಪೀಠದ ಅನುಭವದ ನಡೆ ಅನುಭಾವದ ನುಡಿ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಂತಮ್ಮ ಮತ್ತು ಜಯದೇವಪ್ಪ ಜೈನಕೇರಿ ಶಿವಮೊಗ್ಗ ಇವರ ದತ್ತಿನಿಧಿ ಉಪನ್ಯಾಸದಲ್ಲಿ ಅವರು ‘ವಿಷಮುಕ್ತ ಆಹಾರ ಮತ್ತು ಬದುಕು’ ಕುರಿತು ಅವರು ಮಾತನಾಡಿದರು.

ಡಿ.ಡಿ.ಟಿ. ನಿಷೇಧದ ನಂತರ ಇಂದು ಅದಕ್ಕಿಂತ ಹತ್ತಾರುಪಟ್ಟು ಹೆಚ್ಚು ಅಪಾಯಕಾರಿಯಾದ ರಾಸಯನಿಕಗಳು ಬಳಕೆಯಲ್ಲಿದ್ದು ಕೆಲವು ಬಾರಿ ಇಂತಹ ವಿಷಪೂರಿತ ರಾಸಾಯನಿಕಗಳನ್ನು ಬೆರೆಸಿ ಮಿತಿಗಿಂತಲೂ ಹೆಚ್ಚು ಸಿಂಪಡಿಸುತ್ತಿರುವುದರಿಂದಲೇ ನಮ್ಮ ದೇಶದ ಅಕ್ಕಿ, ಮೆಣಸು, ಕಾಳುಮೆಣಸು ಇತ್ಯಾದಿ ಕೃಷಿ ಉತ್ಪನ್ನಗಳನ್ನು ವಿದೇಶಗಳು ತಿರಸ್ಕರಿಸುತ್ತಿರುವುದು ಆತಂಕಕಾರಿಯಾಗಿದೆ. ಮಧುಮೇಹ ಹಾಗೂ ಕ್ಯಾನ್ಸರ್ ರೋಗಿಗಳ ಸಂಖ್ಯೆ ಇಂದು ವ್ಯಾಪಕವಾಗಿ ಹೆಚ್ಚುತ್ತಿದ್ದು ಇದಕ್ಕೆಲ್ಲವೂ ಮೂಲ ಕಾರಣ ಕೃಷಿಯಲ್ಲಿ ರಾಸಾಯನಿಕದ ಬಳಕೆ ಎಂಬುದು ಅನೇಕ ಸಂಶೋಧನೆಗಳಿಂದ ಧೃಢಪಟ್ಟಿರುತ್ತದೆ. ಕೃಷಿ ಸಂಬಂಧಿತ ವ್ಯಕ್ತಿಗಳಲ್ಲಿ ಇದು ಮೂರು ಪಟ್ಟು ಹೆಚ್ಚಿರುವುದನ್ನೂ ಸಂಶೋಧನೆಗಳು ಧೃಡಪಡಿಸಿವೆÀ. ನರದೌರ್ಬಲ್ಯ ಮತ್ತು ಪಾರ್ಕಿನ್ಸನ್ ಕಾಯಿಲೆಗಳಿಗೆ ಕೂಡಾ ಈ ವಿಷ ರಾಸಾಯನಿಕಗಳು ಕಾರಣವಾಗುತ್ತಿವೆ. ಎಂಡೋಸಲ್ಫಾನ್ ಪರಿಣಾಮದ ಭೀಕರ ದುಷ್ಪರಿಣಾಮದಿಂದಾಗಿ ಅದನ್ನು ನಿಷೇಧಿಸಬೇಕೆಂದು ಇಪ್ಪತ್ತು ವರ್ಷಗಳ ಹೋರಾಟದ ನಂತರ ಸುಪ್ರೀಂಕೋರ್ಟ್ ಅದನ್ನು ನಿಷೇಧಿಸಬೇಕಾಯಿತು ಎಂದರು.
ಭಾರತದಲ್ಲಿ ಶೇ.90ರಷ್ಟು ಬಿ.ಟಿ. ಹತ್ತಿ ಉತ್ಪಾದಿಸಲಾಗುತ್ತಿದ್ದು ಇದಕ್ಕೆ ಅತ್ಯಧಿಕ ರಾಸಾಯನಿಕ ಸಿಂಪಡಿಸಲಾಗುತ್ತಿದೆ. ಈ ಹತ್ತಿಯ ಬೀಜಗಳಿಂದ ಎಣ್ಣೆಯನ್ನು ತಯಾರಿಸಲಾಗುತ್ತಿದ್ದು ಈ ಎಣ್ಣೆ ಎಲ್ಲ ವಿಧದ ಎಣ್ಣೆಗಳಿಗೆ ಕಲಬೆರಕೆಯಲ್ಲಿ ಉಪಯೋಗಿಸಲ್ಪಡುತ್ತಿದ್ದು ರಾಸಾಯನಿಕ ಅತ್ಯಧಿಕ ಮಾರಾಟ ತಂತ್ರದಂತೆ ಈ ಎಣ್ಣೆಯನ್ನೂ ಮಾರಾಟ ಮಾಡಲು ವಿಶೇಷ ವ್ಯವಸ್ಥೆಯೂ ಇದೆ. ಹೀಗೆ ಎಲ್ಲ ವಿಷರಾಸಾಯನಿಕಗಳು ದೇಹವನ್ನು ಪ್ರವೇಶಿಸುತ್ತಿದ್ದು, ಇದರಿಂದ ಮುಕ್ತರಾಗಿ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಆರೋಗ್ಯಪೂರ್ಣವಾಗಿರಲು ಪಾರಂಪರಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು ಮತ್ತು ನಮ್ಮ ಮನೆಯ ಹಿತ್ತಲಿನಲ್ಲಾಗಲೀ, ಟೆರೇಸಿನಲ್ಲಾಗಲೀ ನಮ್ಮ ಮನೆಗೆ ಬೇಕಾದಷ್ಟು ತರಕಾರಿಗಳನ್ನಾದರೂ ಬೆಳೆಸಿಕೊಳ್ಳಬೇಕು. ಪರಿಸರ ರಕ್ಷಣೆಯೂ ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿರುವ್ಯದರಿಂದ ನಮ್ಮ ಮುಂದಿನ ಪೀಳಿಗೆಯನ್ನು ಉಳಿಸುವುದಕ್ಕಾಗಿ ನಾವೆಲ್ಲರೂ ಪರಿಸರವಾದಿಗಳಾಗಿ ಈ ಭಾರತ ಭೂಮಿಯನ್ನು ಪುಣ್ಯಭೂಮಿಯನ್ನಾಗಿ ಮಾಡಬೇಕಾಗಿದೆ ಎಂದವರು ಹೇಳಿದರು.
ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಸ್ವಾಗತಿಸಿ ಯಶೋಧರ್.ಪಿ.ಕರ್ಕೇರಾ ಅವರು ವಂದಿಸಿದರು.
