ಬಂಟ್ವಾಳ: ಮಕ್ಕಳು ಪೋಷಕರ ಹಣ ಅಂತಸ್ತಿಗಿಂತ ದೊಡ್ಡ ಸಂಪತ್ತು. ಮಕ್ಕಳಲ್ಲಿರುವ ಒಳ್ಳೆಯ ಗುಣವನ್ನು ಗುರುತಿಸಿ ಪ್ರಶಂಸಿಸಬೇಕು. ಮಗುವನ್ನು ಮಗುವಿನ ರೀತಿಯಲ್ಲಿ ಬೆಳೆಯಲು ಬಿಟ್ಟು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಬೇಕು. ತನ್ನ ಮಗುವಿನ ಮೇಲೆ ದೃಢವಾದ ವಿಶ್ವಾಸದ ಜತೆ ಪೋಷಿಸುವಂತಹ ಹೊಣೆಗಾರಿಕೆ ಇರಬೇಕು ಎಂದು ಮೂಡಬಿದ್ರೆ ಜೈನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಹೇಳಿದರು.
ಅವರು ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ 2018-19ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಕ್ಷಣ ಕೇವಲ ಉತ್ತಮ ಅಂಕದ ಜತೆ ಜ್ಞಾನ ಗಳಿಸುವುದೇ ಮುಖ್ಯ ಗುರಿಯಲ್ಲ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಕಲಿತ ಜ್ವಾನ ನಿಜವಾದ ಶಿಕ್ಷಣ. ಸಹಪಠ್ಯ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲದೇ ಸಮಾನವಾದ ಪ್ರೋತ್ಸಾಹವಿರಬೇಕು. ಅದು ವ್ಯಕ್ತಿತ್ವ ಬೆಳವಣಿಗೆಯೊಂದಿಗೆ ಅಡಗಿರುವ ಅಪಾರವಾದ ಶಕ್ತಿ ಹೊರಹೊಮ್ಮಲು ಪ್ರೇರೇಪಿಸುತ್ತದೆ. ಅಗಾಧವಾದ ಶಕ್ತಿ ಮನುಷ್ಯನ ಮನಸ್ಸಿನ ಮೂಲೆಯಲ್ಲಿ ಇರುತ್ತದೆ. ಬೆಳಕಿನ ವೇಗಕ್ಕಿಂತ ಮನಸ್ಸಿನ ವೇಗ ತೀವ್ರಗತಿಯಲ್ಲಿದ್ದು ಒಳ್ಳೆಯ ಮನಸ್ಸು- ಯೋಚನೆ, ಭಾವನೆ, ಮತ್ತು ವರ್ತನೆಗಳಿಂದ ಕೂಡಿರುತ್ತದೆ. ಮನುಷ್ಯನ ಬುದ್ದಿವಂತಿಕೆಯೇ ಸಂಪತ್ತು, ತಾಳ್ಮೆಯೇ ಪ್ರಬಲವಾದ ಅಸ್ತ್ರ, ನಂಬಿಕೆಯೇ ಪ್ರಬಲವಾದ ಭದ್ರತೆ, ನಗುವೇ ಪ್ರಬಲವಾದ ಶಕ್ತಿವರ್ಧಕ ಔಷಧ. ವ್ಯಕ್ತಿಯ ಮಾನಸಿಕ ಶಕ್ತಿಯನ್ನು ಉಪಯೋಗಿಸಿದಷ್ಟು ಜಾಸ್ತಿಯಾಗುತ್ತದೆ. ಇಂತಹ ಶಕ್ತಿಯನ್ನು ಬೆಳಕಿಗೆ ತರುವುದೇ ವಿದ್ಯಾಭ್ಯಾಸದ ಗುರಿ ಎಂದು ಹೇಳಿದರು.
ಒಳ್ಳೆಯ ಆಡಳಿತ ಮಂಡಳಿ, ಶಿಕ್ಷಕರ ಕಾಳಜಿ ಮತ್ತು ಪೋಷಕರ ಪ್ರೀತಿವಿಶ್ವಾಸಗಳಿಂದ ಮಾತ್ರ ವಿದ್ಯಾರ್ಥಿಯಲ್ಲಿ ಹುದುಗಿರುವ ಸುಪ್ರ ಪ್ರತಿಭೆಯ ಅನಾವರಣಗೊಳಿಸಲು ಸಾಧ್ಯ. ವಿದ್ಯಾಭ್ಯಾಸದಿಂದ ವಿದ್ಯಾರ್ಥಿಯ ಮಾನಸಿಕ ಪ್ರಗತಿ ಆಗುತ್ತದೆ. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗೆ ಪ್ರತಿ ಸಲವೂ ನಕಾರತ್ಮಕ ಭಾವನೆಗಳನ್ನು ತುಂಬದೇ ಧನಾತ್ಮಕ ಪ್ರಚೋದನೆಗಳನ್ನು ಕೊಡುತ್ತಾ ಹುರಿದುಂಬಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು..
2017-18 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೇದಾನಂದ ಕಾರಂತ್ ಮಾತನಾಡಿ, ತಂದೆ ತಾಯಿ ತನ್ನ ಮಕ್ಕಳ ಮೇಲೆ ಪ್ರೀತಿ ಕೇವಲ ಬಾಯಿಯಿಂದ ಬಾರದೇ ಮನಸ್ಸಿನಿಂದ ಮೂಡಬೇಕು. ಮಗುವನ್ನು ಪ್ರತಿಯೊಂದು ವಿಷಯದಲ್ಲಿ ತೊಡಗಿಸಿಕೊಂಡು ಪುಸ್ತಕದ ಓದಿನ ಜತೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ವ್ಯಕ್ತಿ ಜೀವನದಲ್ಲಿ ಗೆದ್ದು ಉನ್ನತ ಸ್ಥಾನ ಪಡೆಯ ಬೇಕಾದರೆ ಮೊದಲು ಸೋಲುವುದನ್ನು ಕಲಿಸಬೇಕು. ಪ್ರತಿಯೊಬ್ಬ ಪೋಷಕರು ತನ್ನ ಮಕ್ಕಳ ಬಗ್ಗೆ ಗಮನ ಕೊಟ್ಟಾಗ ಯಾವುದೇ ಒತ್ತಡಗಳಾಗದೇ ಮನಸ್ಥಿತಿ ಸರಿಯಾಗಿರುತ್ತದೆ. ವಿದ್ಯಾರ್ಥಿಯಲ್ಲಿ ಬಾಂದವ್ಯ ಸಂಬಂಧವನ್ನು ಉಳಿಸಿ ಬೆಳೆಸುವಲ್ಲಿ ಶಿಕ್ಷಕರ ಜತೆ ರಕ್ಷಕರ ಸಲಹೆ ಸೂಚನೆ ಅತ್ಯಾಮೂಲ್ಯವಾದುದು ಎಂದು ಹೇಳಿದರು.
ಎಸ್.ವಿ.ಎಸ್. ಪದವಿ ಕಾಲೇಜು ಉಪಪ್ರಾಂಶುಪಾಲೆ ಡಾ. ಎಚ್. ಆರ್. ಸುಜಾತ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಯಲ್ಲಿ ಆತ್ಮವಿಶ್ವಾಸ ತುಂಬಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಪೋಷಕ ಮತ್ತು ಶಿಕ್ಷಕರ ಜವಾಬ್ದಾರಿ ಮಹತ್ತರವಾದುದು ಎಂದು ಹೇಳಿದರು.ಶಿಕ್ಷಕ-ರಕ್ಷಕ ಸಂಘದ ಕೋಶಾಧಿಕಾರಿ ಕೃಷ್ಣ ನಾಯಕ್ ಬಿ. 2017-18ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಿದರು.
ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾರಿಗಳ ರಚನೆ ಮಾಡಲಾಯಿತು. ವೇದಾನಂದ ಕಾರಂತ್ ಶಿಕ್ಷಕ-ರಕ್ಷಕ ಸಂಘದ ನೂತನ ಕಾರ್ಯಕಾರಿಣಿ ಸಮಿತಿಯ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದರು ಮತ್ತು ಕೋಶಾಧಿಕಾರಿ ಶಾಂತಿ ಗಿರಿಧರ್ ಆಯ್ಕೆಗೊಂಡರು.
ವೇದಿಕೆಯಲ್ಲಿ ಎಸ್.ವಿ.ಎಸ್. ಪ.ಪೂ. ಕಾಲೇಜು ವಿದ್ಯಾರ್ಥಿಕ್ಷೇವiಪಾಲನಾಧಿಕಾರಿ ಹಾಗೂ ಗಣಕವಿಜ್ಞಾನ ಉಪನ್ಯಾಸಕ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ 2017-18ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಾಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ಬಹುಮಾನಗಳೊಂದಿಗೆ ಸಮ್ಮಾನಿಸಲಾಯಿತು.
ವಿದ್ಯಾರ್ಥಿನಿಯರಾದ ಪ್ರತೀಕ್ಷಾ ಶೆಣೈ, ಶ್ವೇತಾ ಪೈ ಮತ್ತು ಸಂಜನಾ ಪ್ರಾರ್ಥಿಸಿದರು.
ಎಸ್.ವಿ.ಎಸ್. ಪ.ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಪ್ರಸ್ತಾವಿಕ ಮಾತುಗಳನ್ನಾಡಿದರು. ಗಣಿತಶಾಸ್ತ್ರ ಉಪನ್ಯಾಸಕಿ ಕವಿತಾ ಅತಿಥಿ ಪರಿಚಯಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶಾಲಿನಿ ಬಿ. ಪುರಸ್ಕೃತ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಇತಿಹಾಸ ಉಪನ್ಯಾಸಕಿ ಭಾರತಿ ಪಿ. ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ವಂದಿಸಿ, ಕನ್ನಡ ಉಪನ್ಯಾಸಕ ಚೇತನ್ ಎಂ. ಕಾರ್ಯಕ್ರಮ ನಿರೂಪಿಸಿದರು.
