ಕೈಕಂಬ : ಕೋಮುವಾದ ಮತ್ತು ಜಾತೀಯತೆ ಆಧರಿಸಿ ಶಾಂತಿಯುತ ಸಮಾಜದಲ್ಲಿ ಬಿರುಕು ಹುಟ್ಟಿಸಿ, ತನ್ನ ರಾಜಕೀಯ ಬೇಳೆ ಬೇಯಿಸಿಕೊಂಡು ಬಿಜೆಪಿ ಕೋಮುಪ್ರಚೋದನೆ ಮೂಲಕವೇ ಮತ ಗಳಿಸುತ್ತಿದೆ. ಈ ದೇಶದಲ್ಲಿ ಕಾಂಗ್ರೆಸ್ ಬಹುಸಂಸ್ಕೃತಿ ಬೆಂಬಲಿಸುತ್ತಿದೆ. ಕಾಂಗ್ರೆಸ್ ಸಂಸ್ಕೃತಿ ದೇಶದ ಸಂಸ್ಕೃತಿ, ದೇಶದ ಸಂಸ್ಕೃತಿ ಕಾಂಗ್ರೆಸ್ ಸಂಸ್ಕೃತಿ. ಇದು ಸಾಮಾಜಿಕ ನ್ಯಾಯದಡಿ ಕೆಲಸ ಮಾಡುತ್ತಿರುವ ಪಕ್ಷ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಗುರುಪುರ ಕೈಕಂಬದ ಮೇಘಾ ಪ್ಲಾಜದಲ್ಲಿ ನ. 15ರಂದು ಗುರುವಾರ ನಡೆದ ಗುರುಪುರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಅಥವಾ ರಾಜ್ಯದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ಬಡವರಿಗಾಗಿ ಹಲವು ಜನಪರ ಯೋಜನೆ ಜಾರಿಗೊಳಿಸಿದೆ. ಬಿಜೆಪಿ ಸರ್ಕಾರ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಅಸ್ಥಿರಗೊಳಿಸಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಯೋಜನೆಗಳಿಗೆ ಬಿಜೆಪಿ ಶಾಸಕರು ಅಡ್ಡಗಾಲಿಡುತ್ತಿದ್ದಾರೆ ಮತ್ತು ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಮ್ಮದೆಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ಮಾಜಿ ಶಾಸಕ ಮೊೈದಿನ್ ಬಾವ ಮಾತನಾಡುತ್ತ, ಒಂದು ಸೋಲಿಗೆ ವಿಚಲಿತವಾಗಬೇಕಾಗಿಲ್ಲ. ಮುಂದೆ ನಮಗೆ ಗೆಲುವಾಗಲಿದೆ. ಕಾಂಗ್ರೆಸ್ ಕಾರ್ಯಕರ್ತರಾದ ನಾವು ಅತಿಆತ್ಮವಿಸ್ವಾಸ ಬಿಟ್ಟು, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪರವಾಗಿ ಚಿಂತಿಸೋಣ ಮತ್ತು ಒಗ್ಗೂಡಿ ಕೆಲಸ ಮಾಡೋಣ. ಪಕ್ಷ ಬಲಿಷ್ಠಗೊಳಿಸಲು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಕ್ರಿಯರಾಗಬೇಕು ಎಂದರು.
ಬಿಜೆಪಿಗರು ಕೋಮು ಪ್ರಚೋದನೆಗೆ ಒತ್ತು ನೀಡಿರುವುದರಿಂದ ಹಿಂದಿನ ಚುನಾವಣೆಯಲ್ಲಿ ಈ ಭಾಗದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಾಗಿದೆ. ಬಿಜೆಪಿ ಗೆಲುವು ಶಾಶ್ವತವಲ್ಲ. ನಾವು ಪ್ರಯತ್ನಿಸಿದರೆ, ಮುಂದಿನ ಬಾರಿ ಗೆಲುವು ನಮ್ಮದಾಗಲಿದೆ. ಪಕ್ಷ ಕಟ್ಟುವ ಕೆಲಸ ಮಾಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾದ ಪಾಠ ಕಲಿಸೋಣ ಎಂದು ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಆರ್ ಕೆ ಪೃಥ್ವೀರಾಜ್, ಕಾಂಗ್ರೆಸ್ ಮುಖಂಡ ಅಬೂಬಕ್ಕರ್ ಮಾತನಾಡಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಪ್ರಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಕೋಟ್ಯಾನ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಹೈಲ್ ಕಂದಕ್, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ತಾ.ಪಂ ಸದಸ್ಯರಾದ ಜಿ. ಸುನಿಲ್ , ಅಬ್ದುಲ್ ಸಮದ್, ಲ್ಯಾನ್ಸಿ ಪಾಯಸ್, ಮಾ.ಜಿ.ಪಂ.ಸದಸ್ಯ ಕೃಷ್ಣ ಅಮೀನ್,ಗಂಜಿಮಠ ಗ್ರಾ.ಪಂ.ಉಪಾಧ್ಯಕ್ಷ ಆರ್.ಎಸ್ ಜಾಕೀರ್, ಮಹಮ್ಮದ್ ಉಂಞ, ಬಾಷಾ ಮಾಸ್ಟರ್, ಬೂಬ ಪೂಜಾರಿ, ಹರಿಯಪ್ಪ, ಮಜೀದ್ ಸೂರಲ್ಪಾಡಿ, ಮಹಿಳಾ ನಾಯಕಿ ಸೆಲಿನ್ ಫೆರ್ನಾಂಡಿಸ್, ಅಬ್ದುಲ್ ಬಶೀರ್ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಬೂತ್ ಸಮಿತಿ ಅಧ್ಯಕ್ಷರು/ಸದಸ್ಯರು, ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು. ಯೂಸುಫ್ ಉಲಾೈಬೆಟ್ಟು ಮತ್ತು ಮೆಲ್ವಿನ್ ಡಿ’ಸೋಜ ನೀರುಮಾರ್ಗ ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ಕಂಬಳಿ ಸ್ವಾಗತಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ ವಂದಿಸಿದರು.


