ಕೈಕಂಬ : ಆಯುಷ್ ಮುಖ್ಯವಾಗಿ ರೋಗ ತಡೆಗಟ್ಟುವ ಉದ್ದೇಶ ಹೊಂದಿದೆ. ಮಧುಮೇಹ ತಡೆಗಟ್ಟಲು ಆಯರ್ವೇದದಲ್ಲಿ ಸಾಕಷ್ಟು ಔಷಧಿಗಳಿವೆ. ಶಾಲಾ ಮಕ್ಕಳನ್ನು ಸೇರಿಸಿಕೊಂಡು ನಡೆಸಿರುವ ಈ ಜಾಥಾ ನಿಜಕ್ಕೂ ಪರಿಣಾಮಕಾರಿ ಎಂದು ಆಯೂಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ನಾರಾಯಣ ಆಸ್ರ ಹೇಳಿದರು.

ಗಂಜಿಮಠದ ಆಯುರ್‍ಸ್ಪರ್ಶ ಆಯುರ್ವೇದ ಆಸ್ಪತ್ರೆ ಮತ್ತು ಗಂಜಿಮಠ ಆಯುರ್‍ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ ಆಶ್ರಯದಲ್ಲಿ `ವಿಶ್ವ ಮಧುಮೇಹ ದಿನ’ವಾದ ಬುಧವಾರ ಗಂಜಿಮಠದಿಂದ ಗುರುಪುರ ಕೈಕಂಬ ಜಂಕ್ಷನಿನವರೆಗೆ ನಡೆದ `ಮಧುಮೇಹ ಮುಕ್ತ ಭಾರತ ಜನಜಾಗೃತಿ’ ಅಭಿಯಾನ ಪ್ರಯುಕ್ತ ಆಯೋಜಿಸಲಾದ `ಮಧುಮೇಹ ತಡೆಗೆ ವೇಗದ ನಡಿಗೆ’ ಜನಜಾಗೃತಿ ಜಾಥಾ ನಡೆಯಿತು. ಬಳಿಕ ಕೈಕಂಬದ ಶ್ರೀರಾಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ ಶ್ರೀಪತಿ ಕಿನ್ನಿಕಂಬಳ ಮಾತನಾಡುತ್ತ, ಯಾವುದೇ ಸುಧಾರಣೆಯಾಗಬೇಕಿದ್ದರೆ, ಅದು ಮಕ್ಕಳಿಂದ ಆಗಬೇಕು. ಈ ಮಹತ್ವದ ಜಾಥಾದಲ್ಲಿ ಶಾಲಾ ಮಕ್ಕಳ ಸಹಭಾಗಿತ್ವ ಅರ್ಥಪೂರ್ಣವಾಗಿದೆ. ನಮ್ಮ ದೇಶ ಈಗ ಮಧುಮೇಹ ರಾಜಧಾನಿಯಾಗುತ್ತಿದೆ. ಆಹಾರ ಪದ್ಧತಿ ಬಗ್ಗೆ ಜಾಗೃತಿ ವಹಿಸಬೇಕು. ನಾಲಗೆ ಮೇಲೆ ಹಿಡಿತ ಸಾಧಿಸಬೇಕು. ಆಗ ರುಚಿ ಮೇಲೆ ಹಿಡಿತ ಸಾಧಿಸಿದಂತಾಗುತ್ತದೆ. ಮಕ್ಕಳು ಮತ್ತು ಹಿರಿಯರು ಜಂಕ್ ಫುಡ್‍ನಿಂದ ದೂರವಿದ್ದು, ಮನೆ ತಿನಸುಗಳಿಗೆ ಆದ್ಯತೆ ನೀಡಬೇಕು ಎಂದರು.
ಆಯುರ್‍ಸ್ಪರ್ಶ ಆಸ್ಪತ್ರೆಯ ಅಧ್ಯಕ್ಷ ಡಾ. ಸತೀಶ್ ಶಂಕರ್ ಮಧುಮೇಹ ನಿಯಂತ್ರಣದಲ್ಲಿ ಆಹಾರದ ಪಾತ್ರದ ಬಗ್ಗೆ ಮಾತನಾಡುತ್ತ, ಮಧುಮೇಹದಲ್ಲಿ ಟೈಪ್ ಒನ್ ಮತ್ತು ಟೈಪ್ 2 ಎಂದು ಎರಡು ಬಗೆ ಇದೆ. ಈಗ ಶೇ 95ರಷ್ಟು ಟೈಪ್ 2ನೇ ಮಧುಮೇಹವಿದ್ದು, ಇದನ್ನು ತಡೆಗಟ್ಟಲು ಆಯುರ್ವೇದದಲ್ಲಿ ಸೂಕ್ತ ಔಷಧಿಗಳಿವೆ. ಇನ್ಸುಲಿನ್ ಕೊರತೆಯೇ ಈ ರೋಗ ಉಲ್ಭಣಕ್ಕೆ ಕಾರಣ. ಮಧುಮೇಹಿಗಳಲ್ಲಿ ಬಾಯಾರಿಕೆ ಹೆಚ್ಚಾಗಿರುತ್ತದೆ. ರೋಗ ತಡೆಗಟ್ಟಲು ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು. ಮಧುಮೇಹದಲ್ಲಿ ಭಾರತ ಈಗ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಶ್ರೀಮಂತರಾಗುತ್ತಿದ್ದಂತೆ ಈ ರೋಗ ಪ್ರಮಾಣವೂ ಜಾಸ್ತಿಯಾಗುತ್ತದೆ. ಅಂದರೆ, ನಾವು ಶ್ರೀಮಂತರಾಗಬಾರದೆಂದು ಅರ್ಥವಲ್ಲ. ಶ್ರೀಮಂತರಾದರೂ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಆಹಾರ, ವಿಹಾರ, ಮಾನಸಿಕ ಒತ್ತಡರಹಿತ ಜೀವನಕ್ಕಾಗಿ ವ್ಯಾಯಾಮವೂ ಅಗತ್ಯ ಎಂದು ಹೇಳಿದರು.
ಕೈಕಂಬದ ಹೋಟೆಲ್ ಉದ್ಯಮಿ ಹರಿರಾವ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ ಅಕಾಡೆಮಿ ಸಂಚಾಲಕಿ ಮಮತಾ ಶೆಟ್ಟಿ, ಡಾ. ಶ್ರೀದೇವಿ ಭಟ್ ಸಂದರ್ಭೋಚಿತ ಮಾತನಾಡಿದರು. ವೇದಿಕೆಯಲ್ಲಿ ಯುವ ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ಬಿಲ್ಲವ ಮುಖಂಡ ಗಣೇಶ ಪೂಜಾರಿ, ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ, ಐಡಿಯಲ್ ಶಾಲೆಯ ಅಧ್ಯಕ್ಷ ವೈ ಮೊಹಮ್ಮದ್ ಬ್ಯಾರಿ, ಐಡಿಯಲ್ ಶಾಲೆಯ ಮುಖ್ಯ ಶಿಕ್ಷಕಿನಂದಾ ಉಮಾಪ್ರಿಯಾ ಗಡಿಯಾರ್ ಇದ್ದರು. ಗೀತಾ ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸತೀಶ್ ಶಂಕರ್ ವಂದಿಸಿದರು.
ಜಾಥಾದಲ್ಲಿ ರಾಜ್ ಅಕಾಡೆಮಿ ಗಂಜಿಮಠ, ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವೈದ್ಯರು, ಶಿಕ್ಷಕರು, ರಿಕ್ಷಾ ಚಾಲಕರು, ಸಾರ್ವಜನಿಕರು ಪಾಲ್ಗೊಂಡರು. `ಕಾಸರಗೋಡು ಸರ್ಕಾರಿ ಹಿ. ಪ್ರಾ ಶಾಲೆ’ ಚಲನಚಿತ್ರದಲ್ಲಿ ನಟಿಸಿರುವ ರಂಜನ್ ಕಾಸರಗೋಡು, ಸಂಪತ್ ಕಾಸರಗೋಡು, ಆತೀಶ್ ಶೆಟ್ಟಿ, ಪ್ರಕೃತಿ ಮಂಗಳೂರು ಮತ್ತು ಸಪ್ತಾ ಪಾವೂರು ಜಾಥಾಕ್ಕೆ ಮೆರುಗು ಕೊಟ್ಟರು.



