ಮೂಡುಬಿದಿರೆ : ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನದಂಗವಾಗಿ, ವಿಶ್ವದಲ್ಲೇ ಆತಿ (182 ಮೀ.)ಎತ್ತರದ ಪಟೇಲರ ವಿಗ್ರಹವನ್ನು ಗುಜರಾತಿನ ನರ್ಮದಾ ನದಿ ತಟದಲ್ಲಿ ಬುಧವಾರ ಸ್ಥಾಪಿಸಲಾದ ಸಂದರ್ಭ, ಇಲ್ಲಿನ ಬಿಜೆಪಿ ವತಿಯಿಂದ ಸಾರ್ವಜನಿಕ ನೆಲೆಯಲ್ಲಿ `ಏಕತೆಗಾಗಿ ಓಟ’ ಕಾರ್ಯಕ್ರಮ ನಡೆಯಿತು.
ರಾಷ್ಟ್ರಧ್ವಜ ಹಿಡಿದುಕೊಂಡು, ಜ್ಯೋತಿನಗರದಿಂದ ಹೊರಟ `ಏಕತಾ ಓಟ’ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ ಆಳ್ವರು ಚಾಲನೆ ನೀಡಿದರು.
ಸ್ವರಾಜ್ಯ ಮೈದಾನದ ಬಳಿ ಸಮಾಪನಗೊಂಡ “ಏಕತೆಗಾಗಿ ಓಟ”ವನ್ನು ಉದ್ದೇಶಿಸಿ ಮಾತನಾಡಿ ರಾ. ಸ್ವ. ಸೇ. ಸಂಘದ ಸಂಘಚಾಲಕ ಪ್ರೋ| ಎಂ. ವಾಸುದೇವ ಭಟ್, ದೇಶದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭ ಭಾಯಿ ಪಟೇಲರು ಪ್ರಧಾನಿಯಾಗಿರುತ್ತಿದ್ದರೆ ಇಂದು ಭಾರತಕ್ಕೆ ಕಾಡುತ್ತಿರುವ ಕಾಶ್ಮೀರದ ಸಮಸ್ಯೆಯೇ ಇರುತ್ತಿರಲಿಲ್ಲ. ಅಮಾಯಕರ ಮಾರಣ ಹೋಮವೇ ನಡೆಯುತ್ತಿರಲಿಲ್ಲ. ರಕ್ಷಣೆ ಮತ್ತು ಇತರ ಕಾರಣಗಳಿಗಾಗಿ ಅಗಾಧ ಪ್ರಮಾಣದಲ್ಲಿ ಭಾರತ ಕಾಶ್ಮೀರಕ್ಕಾಗಿ ತನ್ನ ಖಜಾನೆಯಿಂದ ಧನ ವಿನಿಯೋಗಿಸುವ ಪ್ರಶ್ನೆಯೇ ಇದಿರಾಗುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಆಳ್ವಾಸ್‍ನ ಕ್ರೀಡಾಳುಗಳೂ ಒಳಗೊಂಡಂತೆ ಮೂಡುಬಿದಿರೆಯ ಯುವಜನತೆ, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್, ಲಕ್ಷ್ಮಣ ಪೂಜಾರಿ, ನಾಗರಾಜ ಪೂಜಾರಿ, ಪ್ರಸಾದ್ ಕುಮಾರ್, ಪಕ್ಷ ಪ್ರಮುಖರಾದ ಕೆ. ಆರ್. ಪಂಡಿತ್, ಈಶ್ವರ ಕಟೀಲ್, ಸುಕೇಶ ಶೆಟ್ಟಿ , ಅಭಿಲಾಷ್ ಶೆಟ್ಟಿ , ರಾಜೇಶ್ ಮಲ್ಯ, ಹರೀಶ್ ಎಂ.ಕೆ. ಮೊದಲಾದವರು ಪಾಲ್ಗೊಂಡಿದ್ದರು.

