ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ಆಧುನಿಕತೆಗೆ ಒಗ್ಗಿಕೊಂಡ ಜನತೆ ನಗರ ಪ್ರದೇಶಗಳಲ್ಲಿ ಹೋಟೆಲ್ ಮತ್ತು ಫಾಸ್ಟ್‍ಫುಡ್ ಕೇಂದ್ರಗಳಿಗೆ ಮೊರೆ ಹೋಗುತ್ತಿರುವ ಪರಿಣಾಮ ಗ್ರಾಮೀಣ ಜನರಿಗಿಂತ ನಗರವಾಸಿಗಳು ಬೇಗನೆ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಗ್ರಾಮೀಣ ಕೃಷಿಕರು ಬೆಳೆಯುವ ಸಾವಯವ ಕೃಷಿ ಪದ್ಧತಿಯಿಂದ ಅಲ್ಲಿನ ಆಹಾರ ಕೂಡಾ ಆರೋಗ್ಯಪೂರ್ಣವಾಗಿರುತ್ತದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸ್ಪರ್ಶ ಕಲಾ ಮಂದಿರದಲ್ಲಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಹಾಗೂ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಶನಿವಾರ ಆರಂಭಗೊಂಡ ಎರಡು ದಿನಗಳ ‘ಸಿರಿ ಧಾನ್ಯ ಆಹಾರ ಮೇಳ, ಪ್ರದರ್ಶನ ಮತ್ತು ಮಾರಾಟ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕೊರತೆಯಿಂದ ಕಣ್ಮರೆಯಾಗಿದ್ದ ಆರೋಗ್ಯದಾಯಕ ಮತ್ತು ಔಷಧೀಯ ಗುಣ ಹೊಂದಿರುವ ಸಿರಿಧಾನ್ಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಜನತೆಗೆ ಮತ್ತಷ್ಟು ಹತ್ತಿರವಾಗಿದೆ ಎಂದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಸಾಕೇತಿಕವಾಗಿ ದೋಸೆ ತಯಾರಿಸುವ ಮೂಲಕ ಗಮನ ಸೆಳೆದರು. ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ ಆಹಾರ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟಿಸಿದರು.

ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್.ಪ್ರಕಾಶ ಕಾರಂತ ಮಾತನಾಡಿ, ಪ್ರಸಕ್ತ ಸಮಾಜದಲ್ಲಿ ಆರೋಗ್ಯಕ್ಕಾಗಿ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದರು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಅಧ್ಯಕ್ಷ ಕೆ.ಕೃಷ್ಣಕುಮಾರ್ ಪೂಂಜ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೇಂದ್ರ ಒಕ್ಕೂಟ ಅಧ್ಯಕ್ಷ ಸದಾನಂದ ನಾವೂರ, ಮಾಜಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಕೃಷಿ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ, ಯೋಜನಾಧಿಕಾರಿ ಪಿ.ಜಯಾನಂದ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕಿರಣ್ ಹೆಗ್ಡೆ, ಸಿರಿ ಧಾನ್ಯ ವಿಸ್ತರಣಾಧಿಕಾರಿ ರಾಮ್ ಕುಮಾರ್, ಉದ್ಯಮಿ ಸುಭಾಶ್ಚಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಸಿರಿ ಸಂಸ್ಥೆ ಯೋಜನಾಧಿಕಾರಿ ಮಂಜುಳಾ ಪ್ರಾಸ್ತಾವಿಕ ಮಾತನಾಡಿದರು. ಮೇಲ್ವಿಚಾರಕರಾದ ಚಂದ್ರಶೇಖರ್ ಸ್ವಾಗತಿಸಿ, ಶಶಿಧರ್ ವಂದಿಸಿದರು. ಮೇಲ್ವಿಚಾರಕ ರಮೇಶ ಕಾರ್ಯಕ್ರಮ ನಿರೂಪಿಸಿದರು.

ಸಿರಿ ಧಾನ್ಯ ಮೇಳದ ವಿಶೇಷತೆ:
ಜೋಳ, ರಾಗಿ, ಸಜ್ಜೆ, ನವಣೆ, ಸಾಮೆ, ಬರಗು, ಊದಲು, ಕೊರಲೆ, ಹಾರಕ ಮತ್ತಿತರ ಹೇರಳವಾಘಿ ಪ್ರೊಟೀನ್ ಅಂಶ ಹೊಂದಿರುವ ಸಿರಿ ಧಾನ್ಯಗಳನ್ನು ಗ್ರಾಹಕರು ಮಾರಾಟ ಮಳಿಗೆಯಲ್ಲಿ ಖರೀದಿಸಲು ಅವಕಾಶ ನೀಡಲಾಗಿತ್ತು. ಸ್ಥಳದಲ್ಲೇ ಸಿದ್ಧಪಡಿಸಿದ ಸ್ವಾದಿಷ್ಟಭರಿತ ಬಿಸಿ ಬಿಸಿ ದೋಸೆ, ಕಷಾಯ, ಜ್ಯೂಸ್ ಸಹಿತ ಚಕ್ಕುಲಿ, ಕೋಡುಬಳೆ, ಬರ್ಪಿ, ಪಲಾವ್, ಕಿಚಡಿ, ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ, ಪುಳಿಯೋಗರೆ ಮತ್ತಿತರ ತಿಂಡಿ ತಿನಿಸುಗಳನ್ನು ಖರೀದಿಸಿ ಗ್ರಾಹಕರು ರುಚಿ ಅನುಭವಿಸಿದರು.
