ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನಲ್ಲಿ ‘ಆಂತರಿಕ ಗುಣಮಟ್ಟ ಭರವಸೆಯ ಕೋಶ ಇದರ ಆಶ್ರಯದಲ್ಲಿ ಕಾಲೇಜಿನ ಪ್ರಾಧ್ಯಾಪಕರಿಗೆ ‘ಉನ್ನತ ಶಿಕ್ಷಣದಲ್ಲಿ ಗುಣವರ್ಧನೆಗೆ ಉಪಕ್ರಮಗಳು’ ಎಂಬ ವಿಷಯದ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ಉಡುಪಿ ಸರಕಾರಿ ಮಹಿಳಾ ಕಾಲೇಜು ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಾದ ಪೊ| ಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಇವರು ತರಬೇತಿ ಕಾರ್ಯಕ್ರಮವನ್ನು ನಡೆಸಿದರು. ನಂತರ ಅವರು ಮಾತನಾಡಿ ಆರ್ಥಿಕವಾಗಿ ಬೆಳೆಯುತ್ತಿರುವ ಉದಾರೀಕೃತ ಭಾರತದಲ್ಲಿ ವಿವಿಧ ರೀತಿಯ ಉನ್ನತ ಶಿಕ್ಷಣದ ಅವಕಾಶಗಳು ವಿಸ್ತಾರಗೊಳ್ಳುತ್ತಿವೆ. ತೆರೆದ ಅರ್ಥ ವ್ಯವಸ್ಥೆಯಲ್ಲಿ ಜಾಗತಿಕ ಮಟ್ಟಕ್ಕೆ ಅನುಗುಣವಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಹಾಗೂ ಗುಣಮಟ್ಟವನ್ನು ಹೆಚ್ಚಿಸುವ ಸವಾಲು ನಮ್ಮ ಮುಂದೆ ಇದೆ. ಈ ಸಂದರ್ಭದಲ್ಲಿ ಉತೃಷ್ಟತೆ, ಗುಣಮಟ್ಟದ ಮೌಲ್ಯ ಮಾಪನ, ಅಭಿವೃದ್ಧಿಪರ ಚಿಂತನೆಗಳು ಹಾಗೂ ಜೀವನೋಪಾಯ ಶಿಕ್ಷಣ ಇವುಗಳು ಉನ್ನತ ಶಿಕ್ಷಣದ ಅವಿಭಾಜ್ಯ ಅಂಗವಾಗಿ ಇರುವಂತೆ ಶಿಕ್ಷಣ ಸಂಸ್ಥೆಗಳು ಉಪಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಆಧುನಿಕ ಕಂಪ್ಯೂಟರ್ ತಂತ್ರಜ್ಞಾನ ಆಡಳಿತ ನಿರ್ವಹಣೆಯಲ್ಲಿ ಹಾಗೂ ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪಾತ್ರ ನಿರ್ವಹಿಸುತ್ತಿದೆ. ಇದರ ಸದ್ಭಳಕೆಯ ಅಗತ್ಯವಿದೆ. ವಿದ್ಯಾರ್ಥಿಗಳ ಸಾಮಥ್ರ್ಯವೃದ್ಧಿ, ಆರ್ಥಿಕತೆಯ ಅಗತ್ಯತೆಗಳು ಜಾಗತಿಕ ಶಿಕ್ಷಣದೊಂದಿಗೆ ಸಮಾನತೆ, ಯೋಗ್ಯ ಶಿಕ್ಷಣ, ಸವಾಲುಗಳನ್ನು ಎದುರಿಸುವ ಶಕ್ತಿ, ಅನ್ವೇಷಣಾ ಪೃವೃತ್ತಿ, ಉದ್ಯಮಶೀಲತೆ ಇವುಗಳನ್ನು ಗಮನದಲ್ಲಿರಿಸಿಕೊಂಡು ಶಿಕ್ಷಣದ ಯೋಜನೆಗಳನ್ನು ರೂಪಿಸುವ ಅಗತ್ಯತೆಯ ಬಗ್ಗೆ ತಮ್ಮ ವಿಚಾರಗಳನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರವೀಶ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಆಂತರಿಕ ಗುಣಮಟ್ಟ ಭರವಸೆಯ ಕೋಶದ ಸಂಯೋಜಕ ಪ್ರೊ. ಸುದರ್ಶನ ಕುಮಾರ್ ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಪಾಶ್ರ್ವನಾಥ ಅಜ್ರಿ ವಂದಿಸಿದರು.


