ಕೈಕಂಬ:ಮಕ್ಕಳಿಗೆ ಕೃಷಿ ಅರಿವು ಮೂಡಿಸುವುದರಲ್ಲಿ ಪೋಷಕರ ಪಾತ್ರ ಮಹತ್ವದ್ದು.ಪಾಲಕರು ಮನೆಯಲ್ಲಿ ಕೃಷಿ ಕೆಲಸದಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ ಮಾಡಬೇಕು. ಉಣ್ಣುವ ಅನ್ನದ ಮಹತ್ವ ತಿಳಿ ಹೇಳಬೇಕು ಎಂದು ಕುಜಿಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾಯರಾದ ಶ್ರೀ.ರಾಮಕೃಷ್ಣ ಪ್ರಭು ಹೇಳಿದರು.
ಅವರು ದಿಶಾ ಟ್ರಸ್ಟ್(ರಿ) ಕೈಕಂಬ, ಶ್ರೀ ಮಹಾಗಣಪತಿ ಕೃಷಿಕರ ಅಭಿವೃದ್ಧಿ ಸಂಘ ಮೂಡನಡುಗೋಡು ಇವರ ಜಂಟಿ ಆಶ್ರಯದಲ್ಲಿ ಕುಜಿಲಬೆಟ್ಟು ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಕೃಷಿಕರ ಸಂಘಗಳ ಸದಸ್ಯರ ಸಾಮಥ್ಯಾಭಿವೃದ್ಧಿ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಾಗಾರದ ಸಭಾಧ್ಯಕ್ಷತೆಯನ್ನು ಶ್ರೀ.ಮಹಾಗಣಪತಿ ಕೃಷಿಕರ ಸಂಘದ ಅಧ್ಯಕ್ಷರಾದ ಶ್ರೀ. ರಾಧಾಕೃಷ್ಣ ಪ್ರಭು ವಹಿಸಿದ್ದರು. ಶಾಲಾ ಎಸ್.ಡಿ.ಎಮ್.ಸಿ ಸದಸ್ಯರಾದ ಶ್ರೀ.ಚಿದಾನಂದ ಕುಲಾಲ್, ದಿಶಾ ಸಂಸ್ಥೆಯ ನಿರ್ದೇಶಕರಾದ ಸಿಲ್ವೆಸ್ಟರ್ ಡಿಸೋಜ, ಕ್ಷೇತ್ರ ಮೇಲ್ವಿಚಾರಕರಾದ ಶ್ರೀಮತಿ ಸುಮಂಗಳ, ಶ್ರೀಮತಿ ರೇಖಾ ಕೃಷಿಕರ ಸಂಘದ ಕಾರ್ಯದರ್ಶಿ ಶ್ರೀಮತಿ ಬೇಬಿ.ಎಮ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾದ ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಜಕರಾದ ರುದೇಶ್ ಸಂಘಟನೆ ಮಹತ್ವ ಹಾಗೂ ಮಣ್ಣು ನೀರು ಸಂರಕ್ಷಣೆಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು.
