ಮೂಡುಬಿದಿರೆ: ಶ್ರೀಮಹಾವೀರ ಸಂಘದ ನೇತೃತ್ವದಲ್ಲಿ ಜೈನಕಾಶಿ ಮೂಡುಬಿದಿರೆಯಲ್ಲಿ ವಿಜಯದಶಮಿಯ ದಿನವಾದ ಶುಕ್ರವಾರ ಮೂಡುಬಿದಿರೆಯ ಜೈನ ಸಮಾಜದವರು ತೆನೆಹಬ್ಬವನ್ನು ಭಕ್ತಿಶ್ರದ್ಧೆಯಿಂದ ಆಚರಿಸಿದರು.

ಮೂಡುಬಿದಿರೆಯ ಇತಿಹಾಸ ಪ್ರಸಿದ್ಧವಾದ 18 ಬಸದಿಗಳ ಪುರೋಹಿತರು ಬೆಟ್ಕೇರಿಯಲ್ಲಿರುವ ಕಟ್ಟೆಯಲ್ಲಿ ಪೂಜೆ ನೆರವೇರಿಸಿದರು. ತೆನೆಯನ್ನು ಪಲ್ಲಕ್ಕಿಯಲ್ಲಿರಿಸಿ ಬೆಟ್ಕೇರಿಯಿಂದ ಜೈನಪೇಟೆಯವರೆಗೆ ಮೆರವಣಿಗೆ ಮೂಲಕ ಬರಲಾಯಿತು.
ಶ್ರಾವಕರು ತೆನೆಗಳನ್ನು ಬಸದಿಗಳಿಗೆ ಹಾಗೂ ತಮ್ಮ ಮನೆಗಳಿಗೆ ಬಂದು ತೆನೆಹಬ್ಬವನ್ನು ಆಚರಿಸಿದರು.
ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ 18 ಬಸದಿಗಳ ಪುರೋಹಿತರು ಶ್ರೀಜೈನಮಠದಲ್ಲಿ ದೇವ ಕಾರ್ಯ ನೆರವೇರಿಸಿದರು. ನಂತರ ಅವರು ಮಾತನಾಡಿ, ಜೀವಿಗೆ ಜೀವಿ ನೆರವು. ಪರಸ್ಪರ ಸೌಹಾರ್ದತೆಯ ಜೀವನ ನಮ್ಮದಾಗಲಿ. ಮನಸ್ಸಿಗೆ ನೆಮ್ಮದಿ ಸಿಗುವುದು ಮಾತ್ರವಲ್ಲ ಚತುರ್ವಿಧ ದಾನಗಳನ್ನು ಯಥೇಚ್ಛವಾಗಿ ಮಾಡುವ ಶಕ್ತಿ ತೆನೆಹಬ್ಬದ ಹೊಸ ಅಕ್ಕಿ ಊಟದ ಮೂಲಕ ದೊರೆಯಲಿ ಎಂದು ಭಟ್ಟಾರಕಶ್ರೀ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಆನಡ್ಕ, ಪ್ರಗತಿಪರ ಕೃಷಿಕ ರಾಜವರ್ಮ ಬೈಲಂಗಡಿ, ಉದ್ಯಮಿ ಅಭಿಜಿತ್ ಎಂ., ಡಿ.ಜೆ ವಿ.ವಿ ಸಂಘದ ಹಿರಿಯ ಸದಸ್ಯ ಹೇಮರಾಜ್ ಸಹಿ ಶ್ರಾವಕರು ಉಪಸ್ಥಿತರಿದ್ದರು.

