ಮೂಡುಬಿದಿರೆ: ತೆರೆದ ಬಾವಿಯೊಂದಕ್ಕೆ ಬಿದ್ದಿದ್ದ ಕರುವೊಂದನ್ನು ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳೀಯರ ನೆರವಿನೊಂದಿಗೆ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಗಂಟಾಲ್‍ಕಟ್ಟೆಯಲ್ಲಿ ಬುಧವಾರ ನಡೆದಿದೆ.

ಸುಮಾರು ಎರಡು ವರ್ಷ ಪ್ರಾಯದ ದನದ ಕರುವೊಂದು ಆಯತಪ್ಪಿ 50 ಅಡಿ ಆಳದ ಆವರಣವಿಲ್ಲದ ತೆರೆದ ಬಾವಿಗೆ ಮಂಗಳವಾರ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಹಸನಬ್ಬ ಗಂಟಾಲ್‍ಕಟ್ಟೆ ಎಂಬವರಿಗೆ ಸೇರಿದ ಕರು ಇದಾಗಿದ್ದು, ಕರುವಿಗಾಗಿ ಹುಡುಕಾಟ ನಡೆಸಿದ್ದರು. ಬುಧವಾರ ಮೋನಪ್ಪ ಪೂಜಾರಿ ಎಂಬವರ ಬಾವಿಯಲ್ಲಿ ಕರು ನೀರಿನಲ್ಲಿ ಮುಳುಗೇಳುತ್ತಿದ್ದುದನ್ನು ಗಮನಿಸಿದ ಮನೆ ಮಂದಿ ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಸಿದ್ದು ದಳದ ಸಿಬಂದಿಗಳು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ಕುಮಾರ್ ನೇತೃತ್ವದಲ್ಲಿ ಸ್ಥಳೀಯರ ನೆರವಿನೊಂದಿಗೆ ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಸಿಬಂದಿಗಳಾದ ವಿಜಯ ದೇವಾಡಿಗ, ಸುರೇಶ್ ರಾಥೋಡ್, ಪ್ರವೀಣ್ ಕುಮಾರ್ ಮತ್ತಿತರರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
