ಕುಪ್ಪೆಪದವು: ಹಲವಾರು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದು ಕೆಮರಾದಲ್ಲಿ ಸೆರೆಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಗುರುಪುರ ಕೈಕಂಬ ಸಮೀಪದ ಮಳಲಿಯ ಮಟ್ಟಿ ಎಂಬಲ್ಲಿ ಕಾಣಿಸಿದ್ದ ಚಿರತೆ ಇದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಟ್ಟಿಯ ಗುಡ್ಡದ ಮೇಲಿನ ಬಂಡೆಕಲ್ಲಿನಲ್ಲಿ ಕುಳಿತಿದ್ದ ಈ ಚಿರತೆಯನ್ನು ಮೊಬೈಲ್ ಕೆಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯ ಚಿಕ್ಕ ಪ್ರಾಣಿ, ನಾಯಿಗಳನ್ನು, ಗುಡ್ಡದಲ್ಲಿ ಎಸೆದ ಮಾಂಸದ ತ್ಯಾಜ್ಯಗಳನ್ನು ತಿಂದು ಬದುಕುತ್ತಿದೆ ಎನ್ನುವುದನ್ನು ಸ್ಥಳೀಯರು ತಿಳಿಸಿದ್ದಾರೆ.
ಗುಡ್ಡದಲ್ಲಿ ಆರಾಮವಾಗಿ ಸಂಚರಿಸುವ ಈ ಚಿರತೆ ಕೆಲವೊಮ್ಮೆ ರಾತ್ರಿಯೂ ಕಂಡುಬರುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೆರೆಹಿಡಿಯಬೇಕೆಂದು ಮನವಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಮಳಲಿಯಲ್ಲಿ ಅಶ್ವಸ್ಥ ಚಿರತೆ ಪತ್ತೆಯಾಗಿದ್ದು, ಸ್ವಲ್ಪ ಹೊತ್ತಲೇ ಮೃತಪಟ್ಟಿತ್ತು. ಈ ಭಾಗದಲ್ಲಿ ಇನ್ನೂ ಅನೇಕ ಚಿರತೆಗಳಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
