ಮೂಡುಬಿದಿರೆ: ಗಾಂಧೀಜಿಯವರು ಬಾಲ್ಯದಿಂದಲೂ ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಪಾಲಿಸುವುದರ ಜೊತೆಗೆ, ತಾನು ತೆಗೆದುಕೊಂಡ ಪ್ರತಿಜ್ಞೆಗಳನ್ನು ಜೀವನದುದ್ದಕ್ಕೂ ಪಾಲಿಸಿ ಸರಳತೆಯಿಂದ ಜೀವನ ನಡೆಸಿದರು. ಅಲ್ಲದೇ ಅವುಗಳನ್ನು ಸಮಾಜದಲ್ಲಿನ ಜನರಲ್ಲಿಯೂ ಅಳವಡಿಸುವ ಪ್ರಯತ್ನ ಮಾಡಿದ್ದಾರೆ. ಅವರ ಜೀವನದಲ್ಲಿ ನಡೆದ ಘಟನೆಗಳೆಲ್ಲವೂ ಅತ್ಯದ್ಭುತ. ಅವರ ಜೀವನವೇ ನಮಗೆ ಸಂದೇಶ ಹಾಗೂ ಆದರ್ಶ. ಆದರೆ ಇಂದಿನ ಯುವಜನತೆಯಿಂದ ಗಾಂಧೀಜಿಯವರು ದೂರವಾಗುತ್ತಿರುವುದು ದುರಂತದ ವಿಚಾರ. ಒಬ್ಬ ಪ್ರಜ್ಞಾವಂತ ಹಾಗೂ ಜವಾಬ್ದಾರಿಯುತ ಭಾರತೀಯರಾಗಿ, ಗಾಂಧೀಜಿಯವರನ್ನು ಕೃತಜ್ಞತಾಪೂರ್ವಕವಾಗಿ ಸದಾ ನೆನಪಿಸುವುದರ ಮೂಲಕ ದೇಶಕ್ಕೆ ಗೌರವವನ್ನು ಸಲ್ಲಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ತಿಳಿಸಿದರು.

ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಜೀವನದ ಕುರಿತು ಅವರು ಮಾತನಾಡಿದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೋ ರಮೇಶ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೋ ಚಂದ್ರಶೇಖರ ದೀಕ್ಷಿತ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಅಜಾಜ್ ಅಹಮದ್, ಎನ್.ಸಿ.ಸಿ. ಅಧಿಕಾರಿ ಮೇಜರ್ ಡಾ. ರಾಧಾಕೃಷ್ಣ ಶೆಟ್ಟಿ, ರೆಡ್ಕ್ರಾಸ್ ಅಧಿಕಾರಿ ಡಾ. ಜಯಲಕ್ಷ್ಮಿ, ರೇಂಜರ್ಸ್ ಅಧಿಕಾರಿ ವಿಜಯಲಕ್ಷ್ಮಿ ಆಚಾರ್ಯ, ಪದವಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಸುಲೋಚನಾ ಪಚ್ಚಿನಡ್ಕ, ಪದವಿಪೂರ್ವ ಕಾಲೇಜಿನ ರೋವರ್ಸ್ ಅಧಿಕಾರಿ ನಾಗೇಂದ್ರ ದಾತೆ. ವಿದ್ಯಾರ್ಥಿ ನಾಯಕ ವಿವೇಕ್ ಉಪಸ್ಥಿತರಿದ್ದರು.
ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಪ್ರಮೀಳಾ ಚೊಕ್ಕಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಹಾವೀರ ಕಾಲೇಜಿನಿಂದ ಮೂಡುಬಿದಿರೆ ಸ್ವರಾಜ್ಯ ಮೈದಾನದ ತನಕ ಸ್ವಚ್ಛತಾ ಅಭಿಯಾನ ಜಾಥಾವನ್ನು ನಡೆಸಲಾಯಿತು.
