ಬಂಟ್ವಾಳ: ಶಾಲಾಭಿವೃದ್ಧಿ ಸಮಿತಿಗಳು ಸಕ್ರೀಯವಾಗಿ ತೊಡಗಿಸಿಕೊಳ್ಳುವುದರ ಜತೆಯಲ್ಲಿ ಶಾಲೆಯೊಂದಿಗೆ ಸಮುದಾಯದ ಸಹಭಾಗಿತ್ವವನ್ನು ಬಲಪಡಿಸಿದಾಗ ಸರಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಅಲ್ಲದೇ ಮಗುಸ್ನೇಹಿ ಶಾಲೆಗಳಾಗಿ ಮಕ್ಕಳನ್ನು ಆಕರ್ಷಿಸಲು ಸಾಧ್ಯ ಎಂದು ಪಡಿ ಸಂಸ್ಥೆಯ ಶಿಕ್ಷಣ ತರಬೇತುದಾರ ಎ.ಗೋಪಾಲ ಅಂಚನ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಂಗಳೂರು ಪಡಿ ಸಂಸ್ಥೆಯ ಆಶ್ರಯದಲ್ಲಿ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಎಸ್‍ಡಿಎಂಸಿ ಮೂರನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ “ಸಮುದಾಯದ ಸಹಭಾಗಿತ್ವದಲ್ಲಿ ಶಾಲಾಭಿವೃದ್ಧಿ ಯೋಜನೆ” ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಶಾಲೆಯಲ್ಲಿ ಸಕಲ ಮೂಲಭೂತ ಸೌಲಭ್ಯಗಳ ಜತೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುವಲ್ಲಿ ಎಸ್‍ಡಿಎಂಸಿ ಮತ್ತು ಸಮುದಾಯದ ಸಹಭಾಗಿತ್ವ ಮಹತ್ತರವಾದುದು ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ ಕಾರ್ಯಾಗಾರ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಪೋಷಕರಿಗೆ ಶಾಲಾ ಬೆಳವಣಿಗೆಗೆ ಪೂರಕವಾದ ವಿಷಯಗಳಲ್ಲಿ ತರಬೇತಿ ನೀಡುವುದು ಇಂದಿನ ಅಗತ್ಯವಾಗಿದೆ ಎಂದರುತೀ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಪಡಂತ್ರಬೆಟ್ಟು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಚಂದಪ್ಪ ಪೂಜಾರಿ ಸ್ವಾಗತಿಸಿದರು.
