ಮೂಡುಬಿದಿರೆ: ಮೂಡಬಿದಿರೆ ತಾಲೂಕಿನ ಪಾಲಡ್ಕ ಹಾಗೂ ಪುತ್ತಿಗೆ ಗ್ರಾಮದ ರೈತರು ಮಳೆಯನ್ನು ಅವಲಂಬಿಸಿ ವಿಸ್ತಾರವಾದ ಬೆಟ್ಟ ಗದ್ದೆಗಳಲ್ಲಿ ಕೃಷಿ ಮಾಡಿದ್ದಾರೆ. ಕಳೆದ ಹಲವಾರು ದಿನಗಳಿಂದ ಮಳೆ ಬಾರದೆ ನೀರಿನ ಕೊರತೆಯಿಂದಾಗಿ, ರೈತರು ಕಷ್ಟ ಪಟ್ಟು ಬೆಳೆಸಿದ ಕೃಷಿ ಫಲ ನೀಡುವ ಸಂಧರ್ಭದಲ್ಲಿ ಕೈಗೆ ಸಿಗಲಾರದ ಪರಿಸ್ಥಿತಿ ನಿರ್ಮಾಣವಾಗುವ ಸನ್ನಿವೇಶ ಉಂಟಾಯಿತು. ಗ್ರಾಮದ ಫಲಾನುಭವಿ ರೈತರು, ನಾಗರಿಕರು ಹಾಗೂ ಸಮಾಜಿಕ ಮುಖಂಡರು ಅಣೆಕಟ್ಟು ನಿರ್ಮಾಣ ಹಾಗೂ ತೋಡು ರಿಪೇರಿ ಸಮಿತಿಯ ಸಂಚಾಲಕರಾದ ರೆ!ಫಾ! ಐವನ್ ಮೈಕಲ್ ರೊಡ್ರಿಗಸ್ ರವರ ( ಧರ್ಮ ಗುರುಗಳು ಪಾಲಡ್ಕ ಚರ್ಚ್) ನೇತೃತ್ವದಲ್ಲಿ ಹಿಂದಿನ ಕಾಲದಲ್ಲಿ ಹಲವಾರು ದಿನಗಳಲ್ಲಿ ನಡೆಯುತ್ತಿದ್ದ ರಿಪೇರಿ ಕೆಲಸವನ್ನು ಸೆ.16 ಹಾಗೂ 17 ರಂದು ನಡೆಸಿ ಕೇವಲ ಎರಡು ದಿನಗಳಲ್ಲಿ ಸಂಪೂರ್ಣಗೊಳಿಸಿದ್ದರು. ಪುತ್ತಿಗೆ ಗ್ರಾಮದ ಕಂಚಿಬೈಲಿನಲ್ಲಿ ಮಾಜಿ ಶಾಸಕ ಹಾಗೂ ಸಚಿವರಾದ ಶ್ರೀ ಅಭಯಚಂದ್ರ ಜೈನ್ ರವರ ವಿಶೇಷ ಕಾಳಜಿಯಿಂದ ಸಣ್ಣ ನೀರಾವರಿ ಇಲಾಖೆ ಯ ಮುಖಾಂತರ ಅನುದಾನಗೊಳಿಸಿ ಗುತ್ತಿಗೆದಾರರಾದ ಲಾರೆನ್ಸ್ ಡಿಸೋಜಾ ರವರು ನಿರ್ಮಾಣ ಮಾಡಿರುವ ಬೃಹತ್ ಕಿಂಡಿ ಅಣೆಕಟ್ಟೆಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಾದ ವಾಸುದೇವ ನಾಯಕ್ ರವರು ಎಂಜಿನಿಯರ್ ಹಾಗೂ ಹಲಗೆ ಕಂಪೆನಿಗೆ ಸತತ ಮನವೊಲಿಕೆಯ ಪ್ರಯತ್ನದಿಂದ ಹಲಗೆಯನ್ನು ಪೂರೈಸಿದರು.

ಹಲಗೆಯನ್ನು ಅಣೆಕಟ್ಟೆಯ ಕಿಂಡಿಗಳಿಗೆ ಅಳವಡಿಸಲು ರೈತರ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಸಮಿತಿಯ ಸಂಚಲಕರಾದ ರೆ! ಫಾ! ಐವನ್ ಮೈಕಲ್ ರೊಡ್ರಿಗಸ್ ಹಾಗೂ ಪಾಲಡ್ಕ ದೈವಸ್ಥಾನದ ಅನುವಂಶೀಯ ಮುಕ್ಕಲ್ದಿ ಶ್ರೀಧರ ಶೆಟ್ಟಿ ಚಾಲನೆ ನೀಡಿದರು.
ತದ ನಂತರ ತೋಡಿನಲ್ಲಿ ನೀರು ಹರಿಯಲು ಬೇಕಾದಷ್ಟೇ ಹಲಗೆ ಹಾಕಿ ನದಿ ಸಮೀಪದ ಜನರಿಗೆ ಯಾವುದೇ ಹಾನಿ ಆಗದ ರೀತಿಯಲ್ಲಿ ನೀರಿನ ಮಟ್ಟವನ್ನು ಏರಿಸಿ ತೋಡಿನಲ್ಲಿ ನೀರು ಹರಿದು ಪಾಲಡ್ಕ ದ ಕೃಷಿ ಭೂಮಿಯನ್ನು ತಣಿಸಲು ಆರಂಭವಾಗಿದೆ.. ಇದರಿಂದಾಗಿ ಪಾಲಡ್ಕ – ಗುಂಡ್ಯಡ್ಕ – ಕಲಸಬೈಲಿನ 500,600 ಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ಕುಡಿಯುವ ನೀರು ಹಾಗೂ ಕೃಷಿ ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗಿ, ಅಂತರ್ಜಲ ಮಟ್ಟ ಏರಿಕೆ ಹಾಗೂ ಕೃಷಿ ಚಟುವಟಿಕೆಗೆ ಸುಲಭವಾಗಿದೆ.

ಈ ಕಾರ್ಯದಲ್ಲಿ ಸರ್ವ ಧರ್ಮದ ನಾಗರಿಕರು ಸೇರಿಕೊಂಡು ಸೌಹಾರ್ದತೆಯನ್ನು ಮೆರೆದು ಇಡೀ ರಾಜ್ಯಕ್ಕೆ ಮಾದರಿಯೇನಿಸಿದೆ. ಇದಕ್ಕೆ ಸಹಕರಿಸಿದ ಊರಿನ ಎಲ್ಲಾ ನಾಗರಿಕರಿಗೆ, ಸಾಮಾಜಿಕ ನಾಯಕರಿಗೆ, ಅಣೆಕಟ್ಟು ನಿರ್ಮಾಣ ಹಾಗೂ ತೋಡು ದುರಸ್ತಿ ಸಮಿತಿ ಯ ಎಲ್ಲಾ ಸದಸ್ಯರಿಗೆ ಮತ್ತು ಯುವಕರಿಗೆ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
