ಮೂಡಬಿದಿರೆ: ಸ್ವತಂತ್ರ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳಿದ್ದರೂ ಬಹುಸಂಖ್ಯಾತ ರಾಜ್ಯಗಳಲ್ಲಿ ಮಾತನಾಡುವ ಭಾಷೆ ಹಿಂದಿಯಾಗಿದೆ. ಹಾಗಾಗಿ ರಾಷ್ಟ್ರ ಭಾಷೆಯಾದ ಹಿಂದಿ ಇಡೀ ಭಾರತದಲ್ಲಿ ಪ್ರಮುಖ ಭಾಷೆಯಾಗಿ ಸ್ಥಾನವನ್ನು ಪಡೆದಿದೆ ಮತ್ತು ಭಾರತದ ಯಾವ ಭಾಗಕ್ಕೂ ಹೋದರೂ ಹಿಂದಿಯನ್ನು ಬಲ್ಲವರಾದರೆ ಸುಲಭವಾಗಿ ಜೀವಿಸಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಿಂದಿ ಭಾಷೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಜೈನ ಪ್ರೌಢ ಶಾಲೆ ಮೂಡಬಿದಿರೆಯ ಅಧ್ಯಾಪಕರಾದ ರಾಯಿರಾಜಕುಮಾರ್ ಹೇಳಿದರು.
ಇಲ್ಲಿನ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ “ಹಿಂದಿ ದಿನಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

excellent - hindi dinaacharane - photo
ಸಮಾರಂಭದ ಅಧ್ಯಕ್ಷತೆ ವಹಿಸಿದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಹಿಂದಿ ಭಾಷೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದು, ಭವಿಷ್ಯದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆಗೈಯಲಿ ಎಂದು ಹಾರೈಸಿದರು.
ಪ್ರಾಂಶುಪಾಲರಾದ ಪ್ರದೀಪ್‍ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿ ಭಾಷೆಯಲ್ಲಿ ಅತ್ಯುತ್ತಮ ಅಂಕಗಳಿಕೆಗೆ ಅವಕಾಶವಿದ್ದು ಸತತ ಪರಿಶ್ರಮದಿಂದ ಸಾಧನೆ ಮಾಡುವಂತೆ ಕರೆ ನೀಡಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿ ಭಾಷೆ ಹಾಗೂ ವ್ಯಾವಹಾರಿಕ ಮಾಧ್ಯಮದ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ರಚಿತವಾದ ಭಿತ್ತಿಪತ್ರಿಕೆಯನ್ನು ಉದ್ಘಾಟಿಸಲಾಯಿತು. ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿ ಭಾಷಾ ವಿಭಾಗ ಮುಖ್ಯಸ್ಥ ವಿನಾಯಕ ಜೋಗ್ ಸ್ವಾಗತಿಸಿದರು. ಝೆಬಾ ಕಾರ್ಯಕ್ರಮ ನಿರೂಪಿಸಿದರು, ಹಿಂದಿ ಭಾಷಾ ಅಧ್ಯಾಪಕಿ ವೃಂದಾ ದಾತೆ ವಂದಿಸಿದರು.

By suddi9

Leave a Reply

Your email address will not be published. Required fields are marked *