ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮೂಡುಬಿದಿರೆ ಜನರ ಸೇವೆ ಮಾಡಲು `ಶಾಸಕರ ಕಚೇರಿ’ ಇಂದಿನಿಂದ ಪ್ರಾರಂಭಗೊಳ್ಳಲಿದೆ.

ಮೂಡುಬಿದಿರೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹಲವು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿದ್ದ ಪಿಡಬ್ಲ್ಯುಡಿ ವಸತಿಗೃಹಕ್ಕೆ ಕಾಯಕಲ್ಪ ನೀಡಲಾಗಿದ್ದು, ಕಚೇರಿಗೆ `ಸೇವಕ’ ಎಂದು ಹೆಸರು ನೀಡಲಾಗಿದೆ. ಶಾಸಕರ ಛೇಂಬರ್, ಮಿನಿ ಮೀಟಿಂಗ್ ಹಾಲ್, ವಿಸಿಟರ್ಸ್ ರೂಂ, ರೆಕಾರ್ಡ್ ರೂಂ, ಶಾಸಕರ ಆಪ್ತ ಸಹಾಯಕರು, ಟೈಪಿಸ್ಟ್, ಸಹಾಯಕರಿರುವ ಸಿಬ್ಬಂದಿ ಕೊಠಡಿಯು ಕಚೇರಿಯೊಳಗಡೆ ವ್ಯವಸ್ಥೆ ಮಾಡಲಾಗಿದೆ. ಮೀಟಿಂಗ್ ಅಥವಾ ಗಣ್ಯರು ಭೇಟಿ ನೀಡುವ ಸಂದರ್ಭದಲ್ಲಿ ಲಘು ಉಪಹಾರ ವ್ಯವಸ್ಥೆ ಮಾಡಲು ಅಡುಗೆ ಕೋಣೆಯ ವ್ಯವಸ್ಥೆ ಕಲಿಸಲಾಗಿದೆ. ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಿಮೆಂಟ್ ಶೀಟ್ , ಫ್ಯಾನ್‍ಗಳನ್ನು ಕೂಡ ಅಳವಡಿಸಲಾಗಿದೆ. ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಮೂರು ಮಂದಿ ಸಿಬ್ಬಂದಿಗಳು ಜನರ ಅಹವಾಲು, ಅರ್ಜಿಗಳನ್ನು ಸ್ವೀಕರಿಸಿ ಶಾಸಕರ ಗಮನಕ್ಕೆ ತರುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರು ಅಥವಾ ಕಾರ್ಯಕ್ರಮಗಳಿಲ್ಲದ ವೇಳೆಯಲ್ಲಿ ಶಾಸಕರನ್ನು ಭೇಟಿ ಮಾಡುವ ಅವಕಾಶವೂ ಇದೆ. ವೇಳಾಪಟ್ಟಿ, ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಶೀಘ್ರವೇ ನೀಡುವ ಚಿಂತನೆಯೂ ನಡೆಯುತ್ತಿದೆ.
ಮಾದ್ಯಮದೊಂದಿಗೆ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ನಾನು ನಾಯಕನಲ್ಲ. ಬದಲಾಗಿ ಜನರ ಸೇವಕ. ಇದೇ ಕಾರಣಕ್ಕಾಗಿ ಕಚೇರಿ `ಸೇವಕ’ ಎಂದು ಹೆಸರಿಟ್ಟಿದ್ದೇನೆ. ಸರ್ಕಾರಿ ಸೌಲಭ್ಯ, ಸವಲತ್ತು ಪಡೆಯಲು ನಾಗರಿಕರು ತಹಸೀಲ್ದಾರ್ ಕಚೇರಿಗೆ ಹೆಚ್ಚು ಬರುತ್ತಾರೆ. ಈ ಸಂದರ್ಭದಲ್ಲಿ ನನ್ನನ್ನು ಭೇಟಿ ಮಾಡಬಹುದು. ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು. ತಹಸೀಲ್ದಾರ್ ಕಚೇರಿ ಪಕ್ಕದಲ್ಲೇ ಶಾಸಕರ ಕಚೇರಿ ಇರುವುದರಿಂದ ಅಲ್ಲಿನ ಸಿಬ್ಬಂದಿಗಳು ಕೂಡ ಅಲರ್ಟ್ ಆಗಿ ಕೆಲಸ ಮಾಡುತ್ತಾರೆ. ಕಚೇರಿ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಅವರ ಸಹಕಾರದಿಂದ `ಸೇವಕ’ ಮೂಡುಬಿದಿರೆಯಲ್ಲಿ ಪ್ರಾರಂಭವಾಗಿದೆ.

