ಮೂಡುಬಿದಿರೆ : ಕ್ರೀಡೆಗಳಲ್ಲಿ ಅತ್ಯುತ್ತಮವಾದ ಕ್ರೀಡೆ ಫುಟ್‍ಬಾಲ್. ಈ ಕ್ರೀಡೆಯಿಂದ ಜೀವನದಲ್ಲಿ ಸ್ಪೂರ್ತಿ, ಆರೋಗ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚುತ್ತದೆ. ತನ್ನ ಬದುಕಿಗೆ ಕ್ರೀಡೆಯು ಪೂರಕವಾಗಿದೆ. ಕ್ರೀಡಾ ಸಚಿವನಾಗಿ ಕ್ರೀಡೆಗೆ ಸೇವೆ ಮಾಡುವ ಅವಕಾಶ ದೊರೆತ ಸಂತೃಪ್ತಿ ತನಗಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಹೇಳಿದರು.
ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್‍ನ ಪ್ಲಾಟಿನಂ ಜುಬಿಲಿ ಪ್ರಯುಕ್ತ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಬುಧವಾರ ನಡೆದ ಅಂತರ್ ಶಾಲಾ ಮತ್ತು ಅಂತರ್ ಕಾಲೇಜು ಫುಟ್‍ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಎನ್.ಎಂ ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಜೆ.ಜೆ.ಪಿಂಟೋ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರದ ಔನ್ನತ್ಯಕ್ಕೆ ಮಣಿಪಾಲ್ ಅಕಾಡೆಮಿಯ ಕೊಡುಗೆ ಶ್ರೇಷ್ಠ. ರಾಷ್ಟ್ರದ ಆರು ಅತ್ಯುತ್ತಮ ವಿವಿಗಳಲ್ಲಿ ಮಣಿಪಾಲ್ ಅಕಾಡೆಮಿಯೂ ಒಂದು ಎಂದು ಹೇಳಿದರು.
ಟ್ರಸ್ಟಿ, ನ್ಯಾಯವಾದಿ ಕೆ.ಆರ್ ಪಂಡಿತ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅಜಾಝ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ.ಪೂ.ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ರಮೇಶ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ಗೌತಮಿ ಪೈ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜ್‍ಪ್ರಸಾದ್ ವಂದಿಸಿದರು.

