ಮೂಡುಬಿದಿರೆ: ಆಳ್ವಾಸ್ ಸಹಕಾರ ಸಂಘ(ನಿ.) ಇದರ 2ನೇ ವರ್ಷದ ವಾರ್ಷಿಕ ಮಹಾಸಭೆಯು ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಶನಿವಾರ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷರಾದ ಮೋಹನ್ ಆಳ್ವ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರನ್ನು ಮುಂದಿಟ್ಟುಕೊಂಡು ಈ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದ್ದು, ಇವರ ಸಹಾಯದಿಂದ ಈ ಎರಡು ವರ್ಷದಲ್ಲಿ ಉತ್ತಮ ಏಳಿಗೆ ಕಂಡಿದೆ ಎಂದು ಸದಸ್ಯರನ್ನು ಅಭಿನಂದಿಸಿದರು. ಇದರಲ್ಲಿ ಬಂದಂತಹ ಲಾಭವನ್ನು ಯಾವೆಲ್ಲಾ ರೀತಿಯಲ್ಲಿ ವಿಂಗಡನೆ ಮಾಡಬೇಕು ಎಂದು ಅಂದಾಜಿಸಲಾವುದು. ಆಳ್ವಾಸ್ ಕನ್ನಡ ಮಾದ್ಯಮ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಯೂ ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮೂಡುಬಿದಿರೆ ವಲಯದಲ್ಲಿ ಆಳ್ವಾಸ್ ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾಕಾರಂಜಿ ಹಾಗೂ ಕ್ರೀಡೆಯಲ್ಲಿ ಅತ್ಯುನ್ನತ ದಾಖಲೆ ನಿರ್ಮಿಸಿದ್ದಾರೆ. ಹಾಗಾಗಿ ಈ ಸಂಘದಿಂದ ಬರುವಂತಹ ಲಾಭವನ್ನು ಈಗಾಗಲೇ ನಿರ್ಮಾಣ ಹಂತದಲ್ಲಿರುವ ಕನ್ನಡ ಭವನಕ್ಕೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಮಾಜಿ ಸಚಿವ ಅಮರನಾಥ್ ಶೆಟ್ಟಿ ಮಾತನಾಡಿ, ಬೆಳೆ, ಶಿಕ್ಷಣ, ವೈದ್ಯಕೀಯ ಹಾಗೂ ಇನ್ನಿತರ ಸಾಲವನ್ನು ಈಗಾಗಲೇ ನೀಡುತ್ತಿದ್ದು, ಈ ವರ್ಷವು ಸಹಕಾರಿ ಸಂಘ ಹೆಚ್ಚಿನ ಲಾಭ ಗಳಿಸಿರುತ್ತದೆ. ಇಂತಹ ಸಹಕಾರಿ ಸಂಘಗಳಲ್ಲಿ ಸದಸ್ಯರ ಪಾತ್ರ ಮಹತ್ತರವಾಗಿರುತ್ತದೆ. ಸದಸ್ಯರ ಸಂಖ್ಯೆ ಜಾಸ್ತಿಯಾದಂತೆ ಸಂಘದ ಲಾಭವೂ ಅಧಿಕವಾಗುತ್ತದೆ. ಇಂತಹ ಸಂಘದಲ್ಲಿ ಗ್ರಾಮೀಣ ಪ್ರದೇಶದ ರೈತರಿಗೆ ಹೆಚ್ಚಿನ ಪ್ರಧಾನ್ಯತೆ ನೀಡಿ ಸಾಲ ನೀಡಲಾಗುತ್ತದೆ. ಈ ಎರಡು ವರ್ಷದಲ್ಲಿ ಸಂಘದ ಲಾಭ ಅಧಿಕವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಲಾಭ ಗಳಿಸಲಿ ಎಂದು ಶುಭಹಾರೈಸಿದರು.
ಈ ಸಭೆಯಲ್ಲಿ ಸಂಘದ ವಾರ್ಷಿಕ ವರದಿ, ಪರಿಶೋಧತ ಲೆಕ್ಕ ಪತ್ರ, ಲಾಭ-ನಷ್ಟ ಪತ್ರ ವಿವರ, ನಿವ್ವಳ ಲಾಭ, 2018-19 ರ ಬಜೆಟ್ ಮಂಡನೆ ಹಾಗೂ ಲೆಕ್ಕ ಪತ್ರ ನೇಮಕಾತಿಯ ಬಗ್ಗೆ ಸವಿವರವಾಗಿ ತಿಳಿಸಲಾಯಿತು.
ಸಭೆಯ ಬಳಿಕ ಸಂಘದ ಸದಸ್ಯರುಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಎ ಮೋಹನ್ ಪಡಿವಾಳ್, ನಿರ್ದೇಶಕರಾದ ಜಯಶ್ರೀ ಎ ಶೆಟ್ಟಿ, ಜಯರಾಮ್ ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ, ಪ್ರಕಾಶಿನಿ ಹೆಗ್ಡೆ, ರಮೇಶ್ ಶೆಟ್ಡಿ, ರಾಮಚಂದ್ರ, ಮೊಹಮ್ಮದ್ ಶರೀಫ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಎಮ ಶೆಟ್ಟಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಿದೇಶಕ ರಾಮಚಂದ್ರ ಸ್ವಾಗತಿಸಿ, ದೇವಿಪ್ರಸಾದ್ ವಂದಿಸಿದರು. ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಯೋಗಿಶ್ ಕೈರೋಡಿ ನಿರೂಪಿಸಿದರು.

