ಮೂಡುಬಿದಿರೆ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜಿನಲ್ಲಿ ಕಲಿಯುತ್ತಿರುವ ಹೆಣ್ಣುಮಕ್ಕಳೂ ಕೂಡಾ ಗುಣಮಟ್ಟದ ಶಿಕ್ಷಣವನ್ನು ಪಡೆದು ಕೆ.ಪಿ.ಎಸ್. ಹಾಗೂ ಐ.ಎ.ಎಸ್.ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ, ಉತ್ತಮ ಕೆಲಸವನ್ನು ಪಡೆದುಕೊಂಡು ತನ್ಮೂಲಕ ಜನಸಾಮಾನ್ಯರ ಸೇವೆಯನ್ನು ಮಾಡಬೇಕು’ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ 2018-19ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರಸ್ತುತ ಮೂಡುಬಿದಿರೆಯಲ್ಲಿ ಉದ್ಯಮವನ್ನು ನಡೆಸುತ್ತಿರುವ ಐ. ರಾಘವೇಂದ್ರ ಪ್ರಭು ವಿದ್ಯಾರ್ಥಿ ಕ್ಷೇಮಪಾಲನಾ ಸಂಘವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ‘ಕಾಲೇಜಿನಲ್ಲಿ ದೊರೆಯುವ ಶಿಕ್ಷಣವು ವಿದ್ಯಾರ್ಥಿಯ ಜೀವನವನ್ನು ಉತ್ತಮವಾಗಿ ರೂಪಿಸಬಲ್ಲದು. ಉಪನ್ಯಾಸಕರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಎಂದು ಮನದಟ್ಟು ಮಾಡಿದರು.
ಕಾಲೇಜಿನ ವಾರ್ಷಿಕಾಂಕ ಸುಮೇರುವನ್ನು ಲೋಕಾರ್ಪಣೆಗೊಳಿಸಿದ ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಅರಿತುಕೊಂಡಾಗ ಜೀವನದಲ್ಲಿ ಅದ್ಭುತವಾದುದನ್ನು ಸಾಧಿಸಬಹುದು’ ಎಂದು ಹೇಳಿದರು.

ಈ ಸಂದರ್ಭದಲ್ಲಿ, ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಸಾಧನೆಗೈದ ಕಾಲೇಜಿನ ಎನ್.ಸಿ.ಸಿ. ಕೆಡೆಟ್‍ಗಳನ್ನು ಗೌರವಿಸಲಾಯಿತು. ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೋ.ಚಂದ್ರಶೇಖರ್ ದೀಕ್ಷಿತ್ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲಪ್ರೋ.ರಮೇಶ್ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್, ವಿದ್ಯಾರ್ಥಿ ನಾಯಕ ವಿವೇಕ್ ಜಿ., ಪದವಿ ವಿಭಾಗದ ಉಪಾಧ್ಯಕ್ಷ ನಿಶಾಂಕ್, ಕಾರ್ಯದರ್ಶಿ ಶ್ವೇತಾ ಪೈ, ಜೊತೆ ಕಾರ್ಯದರ್ಶಿ ರೇವತಿ, ಪದವಿಪೂರ್ವ ವಿಭಾಗದ ಉಪಾಧ್ಯಕ್ಷೆ ರಕ್ಷಣ್ಯ ಹಾಗೂ ಜೊತೆ ಕಾರ್ಯದರ್ಶಿ ಇವಾನಿಯಾ ಶೈನಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಅಜಾಜ್ ಅಹಮದ್ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಚರಿತ್ರೆ ವಿಭಾಗದ ಮುಖ್ಯಸ್ಥೆ ಡಾ. ಜಯಲಕ್ಷ್ಮಿ ಸಾಧಕ ವಿದ್ಯಾರ್ಥಿಗಳ ಪರಿಚಯವನ್ನು ನೀಡಿದರು. ರಂಜಿತಾ ಸಂಘದ ಪದಾಧಿಕಾರಿಗಳ ಪರಿಚಯ ನೀಡಿದರು. ಶ್ರೇಯಾ ಸ್ವಾಗತಿಸಿ ಇವಾನಿಯಾ ವಂದಿಸಿದರು. ಆಲ್ವಾರಿಸ್ ಕೇಲ್ರಾಯ್ ಕಾರ್ಯಕ್ರಮ ನಿರೂಪಿಸಿದರು.

