ಮೂಡಬಿದಿರೆ: ಆಳ್ವಾಸ್ ಸ್ನಾತಕೋತ್ತರ ಎಂಕಾಂ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ‘’ಅಲೋಹಾ-2018’’ ವೇದಿಕೆಯ ಮೂಲಕ ‘’ಫ್ರೇಶರ್ಸ್ ಡೇ’’ ಅನ್ನು ಕಾಲೇಜಿನ ಪಿ.ಜಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿಯನ್ನು ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ, ಪದವಿಯ ಜೊತೆಗೆ ಪ್ರಸ್ತುತ ಜಗತ್ತಿನ ಅವಶ್ಯಕತೆಗಳಿಗುಣವಾಗಿ ಬೇಕಾಗುವ ಕೌಶಲ್ಯವನ್ನು ಹೊಂದಿರುವುದು ಅತೀ ಮುಖ್ಯ. ಈ ಯುಗದಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದು, ಅವುಗಳನ್ನು ಈಡೇರಿಸುವಲ್ಲಿ ವಿದ್ಯಾರ್ಥಿ ಸಮೂಹ ಮುಂದಾಗಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಭವ್ಯ ಭವಿಷ್ಯ ನಿರ್ಮಿಸುವಲ್ಲಿ ಸದಾ ಶ್ರಮಿಸುತ್ತಿದ್ದು, ಅರ್ಹ ಆಕಾಂಕ್ಷಿಗಳ ನೇಮಕಾತಿಗೆ ಅನುಕೂಲವಾಗಲು ದೇಶದ ಪ್ರತಿಷ್ಟಿತ ಕಂಪೆನಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿದೆ ಎಂದು ಹೇಳಿದರು.

m.com freshers day
ಇಂದು ಎಂಕಾಂ ವಿಷಯವು ತರಗತಿ ಪಾಠಕ್ಕೆ ಸೀಮಿತವಾಗಿರದೆ, ಹೊರ ಜಗತ್ತಿನ ಹಲವು ಆಯಾಮಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ದೇಶದ ಆರ್ಥಿಕ ಹಾಗೂ ವಾಣಿಜ್ಯ ಚಟುವಟಿಕೆಗಳ, ಆರ್ಥಿಕ ವಿಶ್ಲೇಷಣೆಗಳ ಜ್ಞಾನವನ್ನು ಹೊಂದಿರುವುದು ಮುಖ್ಯ. ಅದರಲ್ಲೂ ವಿದ್ಯಾರ್ಥಿಗಳು ವೃತ್ತಿ ತರಬೇತಿ ( ಇಂಟರ್ನ್‍ಶಿಫ್) ಯನ್ನು ಕಡ್ಡಾಯವಾಗಿ ತಮ್ಮ ವಿಷಯಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಪೂರೈಸಿ, ಉದ್ಯೋಗ ಮಾರುಕಟ್ಟೆಯ ಬೇಡಿಕೆಗಳನ್ನು ತಿಳಿದುಕೊಳ್ಳಲು ಸಹಕಾರಿ ಎಂದರು.
ವಿಭಾಗದ ಸಂಯೋಜಕ ಪ್ರೋ ಕಿರಣಕೆರೆ ಮಾತನಾಡಿ, ಇಂದಿನ ಉದ್ಯೋಗಗಳ ಆಯ್ಕೆ ಪ್ರಕ್ರಿಯೆ ವಿದ್ಯಾರ್ಥಿಗಳು ಗಳಿಸುವ ಅಂಕಗಳಿಂದ ನಿರ್ಧರಿತವಾಗಿರದೆ, ಕೌಶಲ್ಯಗಳಿಂದ ನಿರ್ಣಯಿಸಲ್ಪಡುತ್ತದೆ. ಅಂಕಗಳು ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿಯದಂತೆ ಇರಲು ಇರುವ ರಕ್ಷಣಾ ಕವಚವೇ ಹೊರತು, ಆಯ್ಕೆಯನ್ನು ನಿರ್ಧರಿಸುವ ಅಂಶವಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ಮಧುಮಾಲ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನೀರಿನ sಸದ್ವಿನಿಯೋಗ, ಹಿತಮಿತ ಆಹಾರ ಬಳಕೆ, ಪರಸ್ಪರ ವಿರುದ್ಧ ಲಿಂಗಗಳಿಗೆ ಗೌರವ, ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸುವುದಾಗಿ ಸಾಮೂಹಿಕವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಎಂಕಾಂ ವಿಭಾಗದ ಉಪನ್ಯಾಸಕಿ ರೇಖಾ, ವಿಭಾಗದ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಭುವನ ಕಾರ್ಯಕ್ರಮ ನಿರ್ವಹಿಸಿ, ರಚನ ಸ್ವಾಗತಿಸಿ, ಕ್ಲಿಟಾ ವಂದಿಸಿದರು.

By suddi9

Leave a Reply

Your email address will not be published. Required fields are marked *