ಬಂಟ್ವಾಳ: ದೇಶದಲ್ಲಿ ಕಳೆದ ನಾಲ್ಕು ಅವಧಿಯಲ್ಲಿ ಪ್ರಧಾನಿಯಾಗಿ ತಂತ್ರಜ್ಞಾನ, ರಕ್ಷಣೆ ಮತ್ತು ಸಂಪರ್ಕ ಜಾಲ ಮೂಲಕ ದೇಶವನ್ನು ಸ್ವಾವಲಂಬಿ ಮತ್ತು ಬಲಿಷ್ಟಗೊಳಿಸಿದ ಕವಿ ಹೃದಯದ ಮಾನವತಾವಾದಿಯಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜಗತ್ತಿನೆಲ್ಲೆಡೆ ಕಂಗೊಳಿಸಿದ್ದಾರೆ ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದರು.
ವಾಮದಪದವು ಸಮೀಪದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸಭಾಂಗಣದಲ್ಲಿ ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಾಜಪೇಯಿ ಅಭಿಮಾನಿ ಬಳಗ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ದೇಶ ಕಂಡ ಧೀಮಂತ ನಾಯಕರ ಪೈಕಿ ವಾಜಪೇಯಿ ಒಬ್ಬರು. ಇವರು ನಿಸ್ವಾರ್ಥ ಮತ್ತು ನಿಷ್ಕಳಂಕ ರಾಜಕಾರಣಿಯಾಗಿ ದೇಶದಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ. ಇಡೀ ಜಗತ್ತೇ ಅವರ ನಿಧನದಿಂದಾಗಿ ಕಂಬನಿ ಮಿಡಿದಿದೆ. ಇವರ ದೇಶಪ್ರೇಮ ಮತ್ತು ಕವಿ ಹೃದಯದ ಮಾತು ಎಂದೆಂದಿಗೂ ವೇದ ವಾಕ್ಯದಂತೆ ನಮಗೆ ಅನುಕರಣೀಯ. ಅವರು ಹಾಕಿ ಕೊಟ್ಟ ಹಾದಿಯಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಸಂಘಟಕ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ತುಂಗಪ್ಪ ಬಂಗೇರ ಪ್ರಾಸ್ತಾವಿಕ ಮಾತನಾಡಿ, ಅಜಾತ ಶತ್ರುವಾಗಿದ್ದ ವಾಜಪೇಯಿ ಅವರು ದೇಶಕ್ಕಾಗಿ ನಿಸ್ವಾರ್ಥ ಜೀವನ ನಡೆಸಿದ್ದಾರೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ. ದೇವದಾಸ ಶೆಟ್ಟಿ, ಪ್ರಮುಖರಾದ ಸುಲೋಚನಾ ಜಿ.ಕೆ ಭಟ್, ಕಮಲಾಕ್ಷಿ ಪೂಜಾರಿ, ಪ್ರಭಾಕರ ಪ್ರಭು, ರತ್ನ ಕುಮಾರ್ ಚೌಟ, ಹರೀಂದ್ರ ಪೈ, ಉದಯ ಕುಮಾರ್ ರಾವ್, ಪುರುಷೋತ್ತಮ ಶೆಟ್ಟಿ, ಲೋಕೇಶ್ ಆಚಾರ್ಯ, ಚಂದ್ರಶೇಖರ ಶೆಟ್ಟಿ ಕುಮಂಗಿಲ, ಸುಂದರ ನಾಯ್ಕ, ಲಕ್ಷ್ಮೀನಾರಾಯಣ ಉಡುಪ, ನಾರಾಯಣ ಶೆಟ್ಟಿ, ಲಕ್ಷ್ಮೀ ಜೆ. ಬಂಗೇರ, ರತ್ನಾಕರ ಪಿ. ಎಂ., ರಂಜಿತ್ ಮೈರ, ಚಿದಾನಂದ ರೈ, ಯಶೋಧರ ಶೆಟ್ಟಿ ದಂಡೆ, ಚಂದ್ರಶೇಖರ ಶೆಟ್ಟಿ ವಾಮದಪದವು, ವಿಜಯ ರೈ ಆಲದಪದವು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ನಡೆದ ‘ಲಘು ವಿಷ್ಣು ಶಾಂತಿ ಹೋಮ’ ಕಾರ್ಯಕ್ರಮದಲ್ಲಿ ಅಪಾರ ಮಂದಿ ಪಾಲ್ಗೊಂಡಿದ್ದರು. ದೇವಪ್ಪ ಶೆಟ್ಟಿ ಕುಂಟಜಾಲು ಸ್ವಾಗತಿಸಿದರು. ಶ್ಯಾಮ್ ಪ್ರಸಾದ್ ಪೂಂಜ ‘ವಂದೇ ಮಾತರಂ’ ಹಾಡಿದರು. ಪಿ.ಎಂ. ಪ್ರಭಾಕರ ವಂದಿಸಿದರು.
