ಬಂಟ್ವಾಳ:ಪುರಸಭಾ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಈ ಜಿಲ್ಲೆ ಕೇಸರಿಮಯವಾಗುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತಡೆಯೊಡ್ಡಬೇಕು. ಒಂದು ಮತ ಕೂಡಾ ಅತೀ ಅಗತ್ಯವಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಾಣೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಹೇಳಿದ್ದಾರೆ.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ಸಿನಲ್ಲಿ ವೈಮನಸ್ಸುಗಳಿದ್ದರೆ ಪಕ್ಷದೊಳಗೆ ಸರಿಪಡಿಸಿಕೊಂಡು ಕ್ಷಣಿಕ ಸೋಲಿಗೆ ಕಂಗೆಡದೆ ಒಗ್ಗಟ್ಟಿನಿಂದ ದುಡಿದರೆ ಕಾಂಗ್ರೆಸ್‍ನ ಎಲ್ಲಾ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. ಅಪಪ್ರಚಾರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಸಾಧನೆ ಬಿಂಬಿಸಿ ಪಕ್ಷವನ್ನು ಬಲವರ್ಧನೆಗೊಳಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಗೆಲುವು ಸಂದರ್ಭಕ್ಕಿಂತಲೂ ಸೋಲಿನ ವೇಳೆ ಜೊತೆಗಿರುವವರು ನೈಜ ಕಾಂಗ್ರೆಸ್ಸಿಗರು ಎಂದು ಅವರು ಬಣ್ಣಿಸಿದರು.
ಸವಾಲಾಗಿ ಸ್ವೀಕರಿದ್ದೇನೆ: ರೈ
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಈ ಕ್ಷೇತ್ರದಲ್ಲಿ ಕ್ಷಣಿಕ ಸೋಲನ್ನು ಸವಾಲಾಗಿ ಸ್ವೀಕರಿಸಿದ್ದು, ವಿಧಾನ ಸಭಾ ಚುನಾವಣೆಗೆ ಪ್ರತಿಕಾರವಾಗಿ ಈ ಬಾರಿ ಪುರಸಭೆ ಮತ್ತು ಲೋಕಸಭೆ ಚುನಾವಣೆ ಗೆಲ್ಲಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಎಸ್.ಗಟ್ಟಿ, ಮಂಜುಳಾ ಮಾಧವ ಮಾವೆ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಬಿ. ಪದ್ಮಶೇಖರ್ ಜೈನ್, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಪ್ರಮುಖರಾದ ಬಿ.ಎಚ್.ಖಾದರ್, ರಾಜಶೇಖರ ಕೋಟ್ಯಾನ್, ಬೇಬಿ ಕುಂದರ್, ಪಿ.ಜಿನರಾಜ ಅರಿಗ, ಜಿ.ಎ.ಬಾವ, ಸವಿತಾ ರಮೇಶ್, ವೆಂಕಪ್ಪ ಗೌಡ, ಮಾಧವ ಮಾವೆ, ಮಹಮ್ಮದ್ ಗಫೂರ್, ಕೃಪಾ ಅಮರ್ ಆಳ್ವ, ಸವಿತಾ , ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ ಮತ್ತಿತರರು ಇದ್ದರು.
