ಮೂಡಬಿದಿರೆ: ಪ್ಲಾಸ್ಟಿಕ್ ನಿಷೇಧದ ಬಗ್ಗೆ ಪುರಸಭಾ ಅಧಿಕಾರಿಗಳು ಕಳೆದ ಎರಡು ವಾರಗಳಿಂದ ವ್ಯಾಪಾರಿಗಳು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಮಂಗಳವಾರ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು, ಫ್ಲೆಕ್ಸ್ ಸಾಮಾಗ್ರಿ ಮಾರಾಟ ಕೇಂದ್ರಗಳಿಗೆ ಪುರಸಭಾ ಅಧಿಕಾರಿಗಳು ದಾಳಿ ನಡೆಸಿ ಸುಮಾರು 72 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು ಹಾಗೂ ಸುಮಾರು ರೂ. 10,000ದಷ್ಟು ದಂಡನಾ ಶುಲ್ಕ ವಸೂಲಿ ಮಾಡಿದರು.
ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ಎಸ್. ನೇತೃತ್ವದಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳಾ ಪೋಲೀಸರ ರಕ್ಷಣೆಯೊಂದಿಗೆ ನಡೆಸಿದ ಈ ಕಾರ್ಯಾಚರಣೆಯಲ್ಲಿ ಪುರಸಭಾ ಕಾರ್ಯಾಲಯದ ಮೆನೇಜರ್ ಸೂರ್ಯಕಾಂತ ಖಾರ್ವಿ, ದ್ವಿ.ದ.ಸ. ಮಂಜುನಾಥ, ಆನಂದ ಬಾಬು, ಸುಧೀಶ್ ಹೆಗ್ಡೆ, ರವಿರಾಜ್, ದಾಮೋದರ, ಮನೋಜ್, ನೇಮಣ್ಣ , ಜನಾರ್ದನ ಮತ್ತಿತರರು ಪಾಲ್ಗೊಂಡಿದ್ದರು.


