ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಬೆಂಗಳೂರಿನ ಎನರ್ಜಿ ಆ್ಯಂಡ್ ವೆಟ್ಲ್ಯಾಂಡ್ಸ್ ರೀಸರ್ಚ್ಗ್ರೂಪ್- ಸೆಂಟರ್ ಫಾರ್ ಇಕಾಲೋಜಿಕಲ್ ಸೈನ್ಸೆಸ್, ಭಾರತೀಯ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಸೋಮವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಲೇಕ್ ಸಮ್ಮೇಳನದ ಪೂರ್ವಭಾವಿಯಾಗಿ `ನೆಬರ್ಹುಡ್ ಮ್ಯಾಪಿಂಗ್ ಆಫ್ ಬಯೋಡೈವರ್ಸಿಟಿ’ ಎಂಬ ವಿಷಯದ ಕಾರ್ಯಾಗಾರವನ್ನು ಐ.ಐ.ಎಸ್ಸಿಯ ಸಂಯೋಜಕ ಡಾ. ಟಿ. ವಿ. ರಾಮಚಂದ್ರ ಉದ್ಘಾಟಿಸಿ ಮಾತನಾಡಿದರು.
ಅರಣ್ಯವನ್ನು ರಕ್ಷಿಸುವುದು ಇಂದಿನ ಯುವಜನತೆಯ ಆದ್ಯ ಕರ್ತವ್ಯವಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಲ್ಲಿ ಜೀವಿಸುವುದು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇಂದು ಹಲವೆಡೆ ಅಕ್ರಮವಾಗಿ ಅರಣ್ಯವನ್ನು ಆಕ್ರಮಣ ಮಾಡಲಾಗುತ್ತಿದೆ. ಅಲ್ಲಿನ ಎಲ್ಲಾ ಸಂಪನ್ಮೂಲಗಳನ್ನು ನಾಶಗೊಳಿಸಿ ವ್ಯಾವಹಾರಿಕವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಭೂ ಕುಸಿತ, ನೀರಿನ ಕೊರತೆಯಂಥಹ ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯ ಜೀವವೈವಿಧ್ಯಗಳ ದಾಖಲೀಕರಣ ಅವಶ್ಯ ಎಂದುಅಭಿಪ್ರಾಯಪಟ್ಟರು.
ಭಾರತ ದೇಶ ಯಥೇಚ್ಛ ಪ್ರಮಾಣದ ಸಂಪನ್ಮೂಲಗಳನ್ನು ಹೊಂದಿದೆ. ಒಂದು ಸಣ್ಣ ಗ್ರಾಮದಲ್ಲೂ ಅನೇಕ ರೀತಿಯ ಜೀವವೈವಿಧ್ಯಗಳನ್ನು ಕಾಣಸಿಗುತ್ತದೆ. ಈ ಜೀವವೈವಿಧ್ಯಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಅರಣ್ಯ ನಾಶದಿಂದ ಆಗುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದು. ಹಾಗಾಗಿ ಈ ಕಾರ್ಯಕ್ರಮದ ಮುಖಾಂತರ ಸ್ಥಳೀಯ ಜೀವವೈವಿಧ್ಯಗಳ ದಾಖಲೀಕರಣ ಪ್ರಕ್ರಿಯೆ ತೀರ್ವತರದಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಶೋಭಾವನ ಹಾಗೂ ಹರೀಶ್ ವನಗಳಲ್ಲಿ ಜೀವವೈಧ್ಯಗಳ ಸಮೀಕ್ಷೆ, ಜಲದ ಗುಣಮಟ್ಟ ಪರೀಕ್ಷೆ ಮತ್ತು ವೃಕ್ಷ, ಪಕ್ಷಿ, ಚಿಟ್ಟೆಗಳ ಗಣತಿ ಹಾಗೂ ದಾಖಲೀಕರಣವನ್ನು ಪ್ರಾಯೋಗಿಕವಾಗಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಆಳ್ವಾಸ್ ಕಾಲೇಜು ಮತ್ತು ಇಡಬ್ಯ್ಲೂಆರ್ಜಿ- ಐಐಎಸ್ಸಿ ಸಂಸ್ಥೆಯ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಇದರನ್ವಯ ವಿದ್ಯಾರ್ಥಿಗಳು ಈ ವಿಷಯದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಹಾಗೂ ತಜ್ಞರಿಂದ ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದಕ್ಷಿಣಕನ್ನಡ, ಉಡುಪಿ, ಕಾರ್ಕಳ ಹಾಗೂ ಮೂಡಬಿದಿರೆಯ ಅನೇಕ ಶಾಲೆಗಳಿಂದ ಸುಮಾರು 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ 50ಕ್ಕೂ ಹೆಚ್ಚಿನ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಆಳ್ವಾಸ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ , ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಸಂಯೋಜಕರು ಡಾ ರಶ್ಮಿ, ಡಾ ಜೆನಿಟಾ ಹಾಗೂ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಉಪನ್ಯಾಸಕರುಗಳು ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದರು.

