ಸುಂಕದಕಟ್ಟೆ: ತುಳು ಭಾಷೆ ಮತ್ತು ಸಂಸ್ಕøತಿಯ ಉಳಿವಿಗಾಗಿ ಈಗ ದೇಶ ವಿದೇಶಗಳಲ್ಲಿ ತುಳುವರಿಂದ ಸಾಕಷ್ಟು ಕೆಲಸಗಳಾಗುತ್ತಿವೆ. ಆಟಿ ತಿಂಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಮೂಲಕ ನಮ್ಮ ಮುಂದಿನ ಪೀಳಿಗೆಗೆ ತುಳುನಾಡಿನ ಆಚಾರ-ವಿಚಾರ ತಿಳಿಸಿಕೊಡುವ ಪ್ರಯತ್ನವಾಗುತ್ತಿದೆ. ಮಂಗಳೂರಿನಲ್ಲಿ `ತುಳುಕೂಟ’ ಆರಂಭವಾಗಿದ್ದ 48 ವರ್ಷಗಳ ಹಿಂದಿನ ಸ್ಥಿತಿ ಮತ್ತು ವರ್ತಮಾನದ ತುಳು ಸ್ಥಿತಿ ಸಾಕಷ್ಟು ಬದಲಾಗಿದೆ. ಈಗ ತುಳುವರು ಮನೆಯಿಂದ ಹೊರಗಡೆಯೂ ಭಾಷಾಭಿಮಾನದಿಂದ ತುಳು ಮಾತನಾಡುತ್ತಾರೆ. ತುಳುವಿನ ಅಭಿವೃದ್ಧಿಯಲ್ಲಿ ತುಳು ಅಕಾಡೆಮಿ ಆರಂಭದಿಂದಲೂ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ. ಸಿ ಭಂಡಾರಿ ಅಭಿಪ್ರಾಯಪಟ್ಟರು.gur-aug-21-ac bhandari-1

ತುಳು ಸಾಹಿತ್ಯ ಅಕಾಡೆಮಿ, ಸುಂಕದಕಟ್ಟೆ `ಬೊಲ್ಪು’ ತುಳು ಸಂಘ, ವಿದ್ಯಾರ್ಥಿ ಸಂಘ, ಹಳೆ ವಿದ್ಯಾರ್ಥಿ ಸಂಘ, ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಮಂಗಳವಾರ ಜರುಗಿದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ತುಳು ಪ್ರಬಂಧ, ತುಳು ಜಾನಪದ ಸಮೂಹ ಗಾಯನ ಮತ್ತು ಸಬಿ ಸವಾಲ್(ಕ್ವಿಜ್) ಒಳಗೊಂಡ `ತುಳು ಪರಪುರ ಪಂತೊಲು-2018′ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.gur-aug-21-dudi beating-1

ತುಳುವಿನ ಅಭಿವೃದ್ಧಿಗೆ ನಮ್ಮೆಲ್ಲ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಬೇಕು. ಭಾಷಾ ಕಂಪು ಪ್ರಸಾರಕ್ಕೆ ಪೂರಕವಾದ ಇಂತಹ ತುಳು ಸ್ಪರ್ಧೆಗಳು ಹೆಚ್ಚೆಚ್ಚು ನಡೆಯಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಗುರುನಾರಾಯಣ ಅಧ್ಯಯನ ಪೀಠದ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಹೇಳಿದರು.gur-aug-21-ac bhandari sanmana

ಅಧ್ಯಕ್ಷತೆ ವಹಿಸಿದ್ದ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ನವೀನ್ಚಂದ್ರ ಸುವರ್ಣ ಮಾತನಾಡುತ್ತ, ನಾವಿಲ್ಲಿ ಎಲ್ಲರೂ ಸಾಮರಸ್ಯ ಮತ್ತು ಅನ್ಯೋನ್ಯದಿಂದ ಬದುಕುತ್ತಿದ್ದು, ಇದಕ್ಕೆ ತುಳುನಾಡಿನ ಮಣ್ಣಿನಲ್ಲಿ ಅಡಕವಾಗಿರುವ ದೈವೀ-ದೇವರ ಶಕ್ತಿಯೇ ಕಾರಣ. ಯುವ ಪೀಳಿಗೆ ಪಾಶ್ಚತ್ಯ ಸಂಸ್ಕøತಿಯತ್ತ ವಾಲುತ್ತಿದ್ದರೆ, ಪಾಶ್ಚಾತ್ಯರು ಮಾನಸಿಕ ಒತ್ತಡ ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರವಾಗಿ ನಮ್ಮ ಸಂಸ್ಕøತಿಗೆ ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ ಇನ್ನಾದರೂ ನಮ್ಮ ಸಂಸ್ಕøತಿಯ ಶಕ್ತಿ ಅರಿಯುವ ಪ್ರಯತ್ನ ಮಾಡಿ, ಸಂಸ್ಕಾರಯುತ ಜೀವನ ಸಾಗಿಸಬೇಕು ಎಂದರು.

ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಕಾಲೇಜಿನ ಪ್ರಾಂಶುಪಾಲೆ ಲತಾ ಕೆ ಪ್ರಸ್ತಾವಿಕ ಮಾತನಾಡಿದರು. ದೀಪ ಬೆಳಗಿದ ಎ. ಸಿ ಭಂಡಾರಿ, ತುಳುನಾಡಿನ ಸಂಸ್ಕøತಿಯ ಪ್ರತೀಕವೆನ್ನಲಾದ `ದುಡಿ’ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಭಂಡಾರಿ ಮತ್ತು ಮುದ್ದು ಮೂಡುಬೆಳ್ಳೆಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ ಭಟ್ ಇದ್ದರು. ತುಳು ಸಂಘ `ಬೊಲ್ಪು’ ಅಧ್ಯಕ್ಷ ಪ್ರೇಮರಾಜ್ ವಂದಿಸಿದರು.

ತುಳು ಜಾನಪದ ಸಮೂಹ ಗಾಯನ, ಸಬಿ ಸವಾಲ್(ಕ್ವಿಜ್), ತುಳು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಗಾಯನ ವಿಭಾಗದಲ್ಲಿ 8, ಕ್ವಿಜ್ ವಿಭಾಗದಲ್ಲಿ 12 ಮತ್ತು ಪ್ರಬಂಧ ಸ್ಪರ್ಧೆ ವಿಭಾಗದಲ್ಲಿ ನಾಲ್ಕು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

(ಎ ಸಿ ಭಂಡಾರಿಯೊಂದಿಗೆ ಮಾತುಕತೆ)

“ಅಧಿಕಾರದಲ್ಲಿ ಈಗಾಗಲೇ ಒಂದು ವರ್ಷ ಕಳೆದಿದ್ದೇನೆ. ಈ ಅವಧಿಯಲ್ಲಿ ತುಳು ಭಾಷೆ, ಸಂಸ್ಕøತಿಗಾಗಿ ಹತ್ತು ಹಲವು ಕೆಲಸ ಮಾಡಿದ್ದೇನೆ. ರಾಜ್ಯ ಭಾಷೆಯಾಗಿ ತುಳುವಿಗೆ ಅಧಿಕೃತ ಮಾನ್ಯತೆ ಒದಗಿಸಲು ಹಾಗೂ ಸಂವಿಧಾನದ 8ನೇ ಪರಿಚ್ಛೇದಡಿ ತುಳು ಭಾಷೆ ಸೇರಿಸಲು ಮುಂದಿನ ಒಂದು ವರ್ಷದ ಅಧಿಕಾರಾವಧಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುವೆ. ಈ ವಿಷಯವಾಗಿ ಸರ್ಕಾರಗಳೊಂದಿಗೆ ಚರ್ಚೆ ನಡೆಸಿದ್ದೇನೆ. ನಮ್ಮ ರಾಜಕಾರಣಿಗಳು ತುಳು ಭಾಷೆಯ ಅಭಿವೃದ್ಧಿಗೆ ಬದ್ಧರಾದಲ್ಲಿ ಈ ಕೆಲಸ ಕಷ್ಟವೇನೂ ಅಲ್ಲ” ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ. ಸಿ ಭಂಡಾರಿ  ಪತ್ರಕರ್ತರಲ್ಲಿ` ತಿಳಿಸಿದರು.

ಶಿಕ್ಷಣದಲ್ಲಿ ತುಳು ಭಾಷೆ ಅಧಿಕೃತಗೊಳಿಸುವ ಕೆಲಸ ನಡೆಯುತ್ತಿದೆ. ಶಾಲಾ ಶಿಕ್ಷಣದಲ್ಲಿ ತುಳುವಿಗೆ ಮಾನ್ಯತೆ ಸಿಕ್ಕಿದಷ್ಟು ಭಾಷೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಅವಿಭಜಿತ ದ ಕ ಮತ್ತು ಉಡುಪಿ ಜಿಲ್ಲೆಯ 35 ಶಾಲೆಗಳಲ್ಲಿ ತುಳು ಭಾಷೆ ಪಠ್ಯವಾಗಿದ್ದರೆ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ ಸಂಖ್ಯೆ 41ಕ್ಕೇ ಏರಿದೆ. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ 750 ಮಕ್ಕಳು ತುಳು ಭಾಷೆ ಕಲಿಯುತ್ತಿದ್ದಾರೆ. ಈಗ ಒಟ್ಟು 2000ಕ್ಕೂ ಹೆಚ್ಚು ಮಕ್ಕಳು ತುಳು ಭಾಷೆ ಕಲಿಯುತ್ತಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ 100 ಶಾಲೆಗಳಿಗೆ ತುಳು ಭಾಷೆ ಕಲಿಕೆ ಯೋಜನೆ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ ಎಂದು ಅಕಾಡೆಮಿಯ ಕೆಲಸಗಳ ಬಗ್ಗೆ ಅಧ್ಯಕ್ಷ ಭಂಡಾರಿ ವಿವರಿಸಿದರು.

ಅಕಾಡೆಮಿ ವತಿಯಿಂದ ಹಿಂದಿ, ಇಂಗ್ಲಿಷ್, ಕನ್ನಡಕ್ಕೆ ತುಳು ಕೃತಿಗಳ ಭಾಷಾಂತರವಾಗುತ್ತಿದೆ. ವಾಮನ ನಂದಾವರ, ಕೆ. ಚಿನ್ನಪ್ಪ ಗೌಡ ಮೊದಲಾದವರ ಕೃತಿಗಳು ಭಾಷಾಂತರಗೊಳ್ಳುತ್ತಿದೆ. ಕನ್ನಡದ `ಕಾರ್ವಾಲೋ'(ಪೂರ್ಣಚಂದ್ರ ತೇಜಸ್ವಿ) ತುಳುವಿಗೆ ಅನುವಾದಗೊಳ್ಳುತ್ತಿದೆ. ಹೀಗೆ ತುಳುವಿನ ಕೃತಿಗಳು ಅನ್ಯ ಭಾಷೆಗಳಿಗೆ ಭಾಷಾಂತರದೊಂದಿಗೆ ತುಳು ಭಾಷಾ-ಸಂಸ್ಕøತಿ ಇತರರಿಗೆ ಪರಿಚಯಿಸುವ ಕೆಲಸವಾಗುತ್ತಿದೆ.

ಮಂಗಳೂರು ವಿವಿ ಕಾಲೇಜಿನಲ್ಲಿ ತುಳುವಿನಲ್ಲಿ ಎಂಎ ತರಗತಿ ಆರಂಭವಾಗಿದ್ದು, ಆಗಸ್ಟ್ 27ರಂದು ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಎರಡು ವರ್ಷದ ಈ ಸ್ನಾತಕೋತ್ತರ ಪದವಿಯಲ್ಲಿ 10 ಪತ್ರಿಕೆಗಳಿದ್ದು, ಎಲ್ಲವೂ ತುಳು ಭಾಷೆಯಲ್ಲೇ ಇರುತ್ತವೆ ಎಂದು ಭಂಡಾರಿ ತಿಳಿಸಿದರು.

By suddi9

Leave a Reply

Your email address will not be published. Required fields are marked *