ಪುಣೆ : ಪುಣೆ ತುಳುಕೂಟದ 21 ನೇ ವಾರ್ಷಿಕೋತ್ಸವ ಸಮಾರಂಭದವು ಬಾಣೇರ್ ನಲ್ಲಿರುವ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದ ಗುಂಡೂರಾಜ್ ಶೆಟ್ಟಿ ಸಭಾಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ಆಗಸ್ಟ್ ೧೫ ರಂದು ನಡೆಯಿತು.

pune tulukoota (1)

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ್ ಶೆಟ್ಟಿ ಬೆಳ್ಳಾರೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಪುಣೆಯಲ್ಲಿರುವ ತುಳುನಾಡ ಬಾಂಧವರನ್ನು ಜಾತಿ ಮತ ,ಬಡವ ಬಲ್ಲಿದನೆಂಬ ಭೇದವಲ್ಲದೆ ಮಕ್ಕಳು ,ಯುವಕರು,ಹಿರಿಯರು ಎಲ್ಲರನ್ನೂ ಭಾಷಾ ಬಾಂಧವ್ಯದೊಂದಿಗೆ ಬೆಸೆಯುತ್ತಾ ಇಷ್ಟೊಂದು ದೊಡ್ಡ ಉತ್ಸವವನ್ನು ಆಚರಿಸುತ್ತಿರುವ ಪುಣೆ ತುಳುಕೂಟದ ಕಾರ್ಯವೈಖರಿ ನಿಜವಾಗಿಯೂ ಅಭಿನಂದನಾರ್ಹವಾಗಿದ್ದು ಅನ್ಯ ಸಂಸ್ಥೆಗಳಿಗೆ ಮಾದರಿಯಾಗಿದೆ . ಇಂದು ನಾವು ನೋಡುವಂತಹ ಹೆಚ್ಚಿನ ಸಂಘಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಮಕ್ಕಳು ಹಾಗೂ ಯುವ ಪೀಳಿಗೆ ಭಾಗವಹಿಸುವುದೇ ಕಡಿಮೆ . ಸಂಘ ಸಂಸ್ಥೆಗಳು ಭಾಷೆ ಸಂಸ್ಕೃತಿ ,ಆಚಾರ ವಿಚಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಮಾಧ್ಯಮವಾಗಿದ್ದು ಯುವ ಪೀಳಿಗೆಗೆ ಹಾಗೂ ಮಕ್ಕಳಿಗೆ ಇದು ತಲುಪಿಸುವ ಕಾರ್ಯ ನಿಜವಾಗಿಯೂ ಆದರೆ ಸಂಘ ಸಂಸ್ಥೆಗಳ ಉದ್ದೇಶ ಸಾರ್ಥಕವಾದಂತೆ . ಈ ಕಾರ್ಯವನ್ನು ತುಳುಕೂಟ ಪ್ರಾಮಾಣಿಕವಾಗಿ ಮಾಡುತ್ತಿದ್ದು ಸಂಘವೆಂದರೆ ಪುಣೆ ತುಳುಕೂಟದಂತಿರಬೇಕು ಎಂಬ ಭಾವನೆ ನನ್ನದಾಗಿದೆ ಎಂದು ಅಭಿಪ್ರಾಯಪಟ್ಟರು .

pune tulukoota (8)

ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರುವ ಎಲ್ಲಾ ಆರ್ಹತೆಗಳು ನಮ್ಮ ತುಳುಭಾಷೆಗಿದ್ದರೂ ಕಾನೂನಾತ್ಮಕ ತೊಡಕುಗಳಿಂದ ಇದುವರೆಗೆ ಸಾಧ್ಯವಾಗಿಲ್ಲ. ಬಹಳಷ್ಟು ಪ್ರಯತ್ನಗಳು ಈ ಹಿಂದೆ ನಡೆದಿದ್ದರೂ ಕೂಡಾ ಇದು ಸಾಧ್ಯವಾಗಿಲ್ಲ . ಆದರೆ ಕಳೆದ ವರ್ಷ ನಮ್ಮ ನಿಯೋಗ ಮತ್ತೊಮ್ಮೆ ಶ್ರಮಿಸಿದ್ದರೂ ಕೂಡಾ ಕೆಲವೊಂದು ತೊಡಕುಗಳು ಎದುರಾಗಿದೆ . ಈ ಪ್ರಸ್ತಾವ ರಾಜ್ಯಮಟ್ಟದಲ್ಲಿ ಮೊದಲು ಜಾರಿಯಾದರೆ ಭವಿಷ್ಯದಲ್ಲಿ ಸಾಧ್ಯವಾದೀತು ಎಂದರು . ದೇಶ ಕಾಯುವ ಯೋಧನನ್ನು ಸನ್ಮಾನಿಸುವ ಕಾರ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷರಾದ ಪ್ರೊ . ತುಕಾರಾಮ ಪೂಜಾರಿ ಮಾತನಾಡಿ, ಪುಣೆಯಲ್ಲಿ ಹತ್ತು ಹಲವು ತುಳುಕನ್ನಡಿಗರ ಸಂಘಟನೆಗಳಿದ್ದರೂ ಎಲ್ಲರನ್ನೂ ಒಗ್ಗೂಡಿಸಿ ಮಾತೃಸ್ಥಾನದಲ್ಲಿ ನಿಂತು ತುಳುಕೂಟ ಮಾಡುತ್ತಿರುವ ಸಾಂಸ್ಕೃತಿಕ ,ಭಾಷಿಕ ಸೇವೆ ಗುರುತರವಾಗಿದೆ . ಇಂದು ೭೨ ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ದೇಶ ಕಾಯುವ ಸೈನಿಕನ ಸಮ್ಮಾನಿಸಿ ದೇಶಪ್ರೇಮ ಮೆರೆದಿರುವಂತೆಯೇ ಅಖಂಡ ಭಾರತದ ಕಲ್ಪನೆಯೊಂದಿಗೆ ಹಿಂದೂ ಧರ್ಮಾದ ರಕ್ಷಣೆಗಾಗಿ ಹೋರಾಡಿದ ಪುಣೆಯನ್ನು ಕರ್ಮಭೂಮಿಯನ್ನಾಗಿಸಿಕೊಂಡ ಶಿವಾಜಿ ಮಹಾರಾಜರನ್ನು ನೆನಪಿಸುವುದೂ ನಮ್ಮ ಕರ್ತವ್ಯವಾಗಿದೆ . ಅಂತೆಯೇ ಪೋರ್ಚುಗೀಸರನ್ನು ಏಕಾಂಗಿಯಾಗಿ ಸೆಣಸಿ ತುಳುನಾಡಿನ ರಕ್ಷಣೆಯನ್ನು ಮಾಡಿದ ರಾಣಿ ಅಬ್ಬಕ್ಕಳನ್ನು ನಾವು ಮರೆತಿದ್ದು ದುರಂತವಾಗಿದೆ . ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತುಳುನಾಡಿನಿಂದಲೇ ಹೊರಾಟ ಆರಂಭವಾಗಿತ್ತು . ಅಂತಹ ಇತಿಹಾಸಗಳನ್ನು ನಾವು ನೆನಪಿಡಬೇಕಾಗಿದೆ . ಕೃಷಿ ಪ್ರಧಾನವಾದ ಸಂಪತ್ತನ್ನು ಹೊಂದಿದ್ದ ನಮ್ಮ ತುಳುನಾಡು ಇಂದು ಕೃಷಿಯಿಲ್ಲದೆ ಬರಡಾಗುತ್ತಿದೆ .ಆಧುನಿಕ ಯಾಂತ್ರೀಕೃತ ಬದುಕಿನಲ್ಲಿ ಪೂರ್ವಜರು ಪಾಲಿಸಿಕೊಂಡು ಬಂದ ನಮ್ಮ ಮೌಲಿಕ ಸಂಪ್ರದಾಯ ,ಸಂಸ್ಕೃತಿಗಳನ್ನೂ ತುಳುವರು ಮರೆಯುತ್ತಿದ್ದು ಆಡಂಬರದ ಆಚರಣೆಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿರುವುದು ದುರಂತವಾಗಿದೆ . ಹೊರನಾಡಿನ ತುಳುವರು ನಮ್ಮ ಸಂಸ್ಕೃತಿಯನ್ನು ಮರೆಯದೆ ಪೋಷಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ . ನಮ್ಮ ಹಿರಿಯರಿಂದ ಬಂದ ಭಾಷೆ ,ಸಂಸ್ಕೃತಿ ,ಸಂಪ್ರದಾಯಗಳು ಅಳಿಯದೆ ಮುಂದಿನ ಪೀಳಿಗೆಯೂ ಇದನ್ನು ನೆನಪಿಟ್ಟು ಪಾಲಿಸುವಂತೆ ಪ್ರೇರೇಪಿಸುವ ಕಾರ್ಯವನ್ನು ಪುಣೆ ತುಳುಕೂಟದಂತಹ ಸಂಸ್ಥೆಗಳು ಜವಾಬ್ದಾರಿಯುತವಾಗಿ ಮಾಡಬೇಕಾಗಿದೆ ಎಂದರು .

pune tulukoota (5)

ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಮಾತನಾಡಿ, ಪುಣೆ ತುಳುಕೂಟ ಪುಣೆಯಲ್ಲಿನ ತುಳುನಾಡ ಬಾಂಧವರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾಜದ ಕಟ್ಟಕಡೆಯ ಜನರನ್ನೂ ಒಟ್ಟುಸೇರಿಸಿ ನಮ್ಮ ನೂತನ ಭವನದಲ್ಲಿ ಉತ್ತಮ ಕಾರ್ಯಕ್ರಮವನ್ನು ಸಂಯೋಜಿಸಿದ್ದು ನಮ್ಮ ದೊಡ್ಡ ಸೌಭಾಗ್ಯವಾಗಿದ್ದು ಎಲ್ಲ ತುಳುವರನ್ನು ಇಲ್ಲಿ ಕಂಡಾಗ ಇದರಲ್ಲಿ ಭಾಗವಹಿಸಿದ ನನಗೆ ಹೃದಯ ತುಂಬಿ ಬಂದಿದೆ .ಈ ಭವನ ಸಮಸ್ತ ತುಳುವರಿಗೆ ಹೆಮ್ಮೆಯ ಭವನವಾಗಿದ್ದು ಎಲ್ಲರಿಗೂ ಇದರ ಪ್ರಯೋಜನ ಸಿಗಲಿದೆ . ಪುಣೆ ತುಳುಕೂಟ ಸಾಂಸ್ಕೃತಿಕ ,ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದರು .

ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ ರೈ ತನ್ನ ಅಧ್ಯಕ್ಷೀಯ ಮಾತನಾಡಿ, ಮುಖ್ಯವಾಗಿ ದೇಶದ ರಕ್ಷಣೆಗೋಸ್ಕರ ತನ್ನ ಜೀವನವನ್ನೇ ಮುಡಿಪಾಗಿಸಿಕೊಂಡ ವೀರ ತುಳುನಾಡ ಯೋಧನನ್ನು ನಮ್ಮ ಸಂಘದಿಂದ ಸನ್ಮಾನಿಸಿರುವುದು ತುಳುಕೂಟದದ ಇತಿಹಾಸದಲ್ಲಿ ಸದಾ ನೆನಪಿಡುವಂತಹ ಕಾರ್ಯವಾಗಿದ್ದು ಅಪಾರ ಮಾನಸಿಕ ಸಂತೃಪ್ತಿಯನ್ನು ನೀಡಿದೆ . ತುಳು ಭಾಷೆ ,ಸಂಸ್ಕೃತಿಯನ್ನು ಪೋಷಿಸುವ ತುಳುಕೂಟಕ್ಕೆ ಸದಾ ಬೆಂಬಲಿಸುವ ಸರ್ವ ತುಳುನಾಡ ಬಂಧುಗಳ ಪ್ರೀತಿವಿಶ್ವಾಸಗಳಿಗೆ ಚಿರಋಣಿಯಾಗಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ವರ್ಷದ ಶ್ರೇಷ್ಠಸಾಧಕನನ್ನಾಗಿ ಗುರುತಿಸಿ ಪುಣೆಯ ಹಿರಿಯ ಹೋಟೆಲ್ ಉದ್ಯಮಿ,ಸಮಾಜಸೇವಕ ವಿಶ್ವನಾಥ ಡಿ ಶೆಟ್ಟಿ ಹಾಗೂ ವೀರಯೋಧ ಶ್ಯಾಮ್ ರಾಜ್ ಎಡನೀರ್ ಇವರುಗಳನ್ನು ಶಾಲು ಹೊದೆಸಿ ,ಫಲ ಪುಷ್ಪ,ಸ್ಮರಣಿಕೆ ,ಸಮ್ಮಾನ ಪತ್ರಗಳನ್ನು ನೀಡಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು .

vishwanatha d shetty sanmana
ಸಮ್ಮಾನಕ್ಕುತ್ತರಿಸಿ ವಿಶ್ವನಾಥ ಡಿ ಶೆಟ್ಟಿಯವರು ಮಾತನಾಡಿ ಇಂದು ಪುಣೆ ತುಳುಕೂಟದ ಪ್ರೀತಿಯ ಸಮ್ಮಾನ ದೇಶದ ಹೆಮ್ಮೆಯ ಯೋಧನೊಂದಿಗೆ ನನಗೆ ಸಿಕ್ಕಿರುವುದು ನನ್ನ ಜೀವನದ ಸೌಭಾಗ್ಯವಾಗಿದೆ . ತುಳುಕೂಟ ಪುಣೆ ತುಳುಭಾಷೆ ,ಸಂಸ್ಕೃತಿಯ ಸೇವೆ ಮಾಡುತ್ತಿದ್ದು ತುಳುವರೆಲ್ಲರ ಹೃದಯವನ್ನು ಗೆದ್ದಿದೆ ಎನ್ನಲು ಹೆಮ್ಮೆಯಾಗುತ್ತಿದೆ . ಪ್ರತಿಯೊಬ್ಬರೂ ನಮ್ಮ ಭಾಷೆ ,ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ಅಗತ್ಯತೆಯಿದೆ ಎಂದರು .
ಯೋಧ ಶ್ಯಾಮರಾಜ್ ರವರು ಸಮ್ಮಾನಕ್ಕುತ್ತರಿಸಿ ಮಾತನಾಡಿ, ಇಂದು ನನ್ನನ್ನು ಗುರುತಿಸಿ ತುಳುಕೂಟದ ಈ ಗೌರವ ಸಿಕ್ಕಿರುವುದು ದೇಶದ ಎಲ್ಲ ಯೋಧರಿಗೆ ಸಿಕ್ಕಿದ ಗೌರವೆಂದು ಸ್ವೀಕರಿಸುತ್ತೇನೆ .ಇಂದು ನನ್ನ ದಿನವೆಂದುಕೊಂಡು ಹರ್ಷಿತನಾಗಿದ್ದೇನೆ . ಯಾವುದೇ ಕಷ್ಟದ ಸಂದರ್ಭದಲ್ಲಿಯೂ ದೃತಿಗೆಡದೆ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದಾಗಿದೆ . ಕತ್ತಲೆ ದಾಟಿ ಮುನ್ನಡೆದರೆ ಬೆಳಕನ್ನು ಕಾಣಬಹುದಾಗಿದೆ ಎಂದರು .

pune tulukoota (7)

ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಯಿತು . ಅತಿಥಿಗಳನ್ನು ಶಾಲು ಹೊದೆಸಿ ,ಸ್ಮರಣಿಕೆ ,ಹೂಗುಚ್ಛ ನೀಡಿ ಗೌರವಿಸಲಾಯಿತು ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ,ಕಾರ್ಯಕ್ರಮದ ಪ್ರಾಯೋಜಕರುಗಳನ್ನು ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.

pune tulukoota (3)
ನವಿತಾ ಎಸ್ ಪೂಜಾರಿ ,ಗೀತಾ ಡಿ ಪೂಜಾರಿ ,ಸರಸ್ವತಿ ಸಿ ಕುಲಾಲ್ ಪ್ರಾರ್ಥಿಸಿದರು. ಶಿಕ್ಷಣಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಮಾಣಿಬೆಟ್ಟು ಪ್ರವೀಣ್ ಶೆಟ್ಟಿ ಪುತ್ತೂರು ಪ್ರಾಯೋಜಿತ ವಿದ್ಯಾರ್ಥಿಗಳ ಸತ್ಕಾರವನ್ನು ನಡೆಸಿಕೊಟ್ಟರು .ಈ ಸಂದರ್ಭ ಪುಣೆ ತುಳುಕೂಟದ ನೂತನ ವೆಬ್ ಸೈಟ್ ನ್ನು ಉದ್ಘಾಟಿಸಲಾಯಿತು .
ಮನೋರಂಜನೆಯಂಗವಾಗಿ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ಸರಿತಾ ತುಷಾರ್ ಶೆಟ್ಟಿ ಮತ್ತು ಸರಿತಾ ವೈ ಶೆಟ್ಟಿಯವರ ನೇತೃತ್ವದಲ್ಲಿ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈವಿಧ್ಯಗಳು ,ಖ್ಯಾತ ಸಂಗೀತ ವಿದುಷಿ ನಂದಿನಿ ರಾವ್ ಗುಜರ್ ರವರಿಂದ ಸಂಗೀತ ಕಾರ್ಯಕ್ರಮ ,ಬಂಟರ ಯುವ ವೇದಿಕೆ ಮುಲ್ಕಿ ಹಾಗೂ ಬಂಟರ ಮಹಿಳಾ ವಿಭಾಗ ಮುಲ್ಕಿ ಕಲಾವಿದರಿಂದ ಖ್ಯಾತ ರಂಗನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ಇವರ ದಕ್ಷ ನಿರ್ದೇಶನದಲ್ಲಿ ತುಳು ಜಾನಪದ ಐತಿಹಾಸಿಕ ,ಕ್ರಾಂತಿಕಾರಿ ತುಳು ನಾಟಕ “ಸತ್ಯದ ಸಿರಿ “ಪ್ರದರ್ಶನಗೊಂಡಿತು . ತುಳುನಾಡಿನ ಸಾಂಪ್ರದಾಯಿಕ ಪದ್ಧತಿಯ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು .

pune tulukoota (4)

ಈ ಸಂಧರ್ಭದಲ್ಲಿ ಸಂಘದ ವಾರ್ಷಿಕ ಸಮ್ಮಾನ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ ,ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಅಂಗವೈಫಲ್ಯತೆಯನ್ನು ಹೊಂದಿದ ನಿವೃತ್ತ ಯೋಧರಾದ ಶ್ಯಾಮರಾಜ್ ಎಡನೀರ್ ,ಸಂಘದ ಸ್ಥಾಪಕಾಧ್ಯಕ್ಷ ಜಯ ಕೆ ಶೆಟ್ಟಿ, ಗೌರವಾಧ್ಯಕ್ಷ ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ ,ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ ಎಣ್ಣೆಹೊಳೆ ,ಪ್ರಧಾನ ಕಾರ್ಯದರ್ಶಿ ಕಿರಣ್ ಬಿ ರೈ ಕರ್ನೂರು ,ಕೋಶಾಧಿಕಾರಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ ,ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಡಿ ಶೆಟ್ಟಿ ,ಯುವ ವಿಭಾಗದ ಕಾರ್ಯಾಧ್ಯಕ್ಷ ಅಡ್ವೊಕೇಟ್ ರೋಹನ್ ಪಿ ಶೆಟ್ಟಿ ,ಪಿಂಪ್ರಿ ಚಿಂಚ್ವಾಡ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್ ಸುವರ್ಣ ಉಪಸ್ಥಿತರಿದ್ದರು . ಸಂತೋಷ್ ಶೆಟ್ಟಿ ಎಣ್ಣೆಹೊಳೆ , ವಿಕೇಶ್ ರೈ ಶೇಣಿ ಅತಿಥಿಗಳನ್ನು ಪರಿಚಯಿಸಿದರು .ಯುವ ವಿಭಾಗದ ರತನ್ ಸಾಲ್ಯಾನ್ ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು . ಶರತ್ ಶೆಟ್ಟಿ ಉಳೆಪಾಡಿ ,ಪ್ರಿಯಾ ಹೆಚ್ ದೇವಾಡಿಗ ಸಮ್ಮಾನ ಪತ್ರ ವಾಚಿಸಿದರು . ಕಾಂತಿ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *